20-02-1983, ಭಾನುವಾರ
ನಾಳೆ VIVA ಇದ್ರೂ ಸಹ "ಕವಿರತ್ನ ಕಾಳಿದಾಸ"ಕ್ಕೆ ಹೋಗಿದ್ದೆ - ರಾಜೂ ಕೃಪೆಯಿಂದ. ರಾಜೂಗೆ ಅನಗತ್ಯ ಬೇಸರ ಉಂಟು ಮಾಡಿ - ಜಗಳವಾಡಿದ್ದ ನೆನಪು ಇನ್ನೂ ಮಾಸಿಲ್ಲ. ಈ ಪರಿಸ್ಥಿತಿಯಲ್ಲಿ ಯಾವ ಕೃತಜ್ಞತೆಯನ್ನೂ ಅರ್ಪಿಸಲು ಸಾಧ್ಯವಾಗುತ್ತಿಲ್ಲ. "ತಪ್ಪಿತಸ್ಥ" ಭಾವನೆಯಿಂದ ಹೊರಬರಲು ತೊಳಲಾಡಿದೆ.
ಎಲ್ಲ ರೀತಿಯಿಂದಲೂ ಒಂದು ಉತ್ತಮ ಚಿತ್ರ ನೋಡಲು (ಅದರಲ್ಲೂ ರಾಜ್ ಚಿತ್ರ - ಬಿಡುಗಡೆಯಾದ ಮಾರನೆಯ ದಿವಸ) ಅವಕಾಶ ಮಾಡಿಕೊಟ್ಟ ರಾಜೂಗೆ ಕೃತಜ್ಞತೆ ಹೇಳದಿರುವುದು - ನಾನು ಮಾಡಬಹುದಾದ ದೊಡ್ಡ ತಪ್ಪು.
ಚಿತ್ರದ ನಾಯಕಿ ಜಯಪ್ರದ ನಿಜಕ್ಕೂ ಸುಂದರಿಯೆನ್ನುವುದರಲ್ಲಿ ಸಂಶಯವಿಲ್ಲ. (‘ಮೊನ್ನೆ ಮೊನ್ನೆ ನೋಡಿದ ಪಲ್ಲವಿ-ಅನುಪಲ್ಲವಿ ಚಿತ್ರದ ಕಿರಣ್ ಇದುವರೆಗೂ ನೆನಪಿನಲ್ಲಿ ಉಳಿದಿದ್ದು ಈಗ ಜಯಪ್ರದಾ ಆಕ್ರಮಿಸಿರಬಹುದೆ?)
ಮಯೂರಕ್ಕೆ ಕೆಲವು ಹನಿಗವನಗಳನ್ನು ಪ್ರಕಟನೆಗಾಗಿ ಕಳುಹಿಸಿದ್ದೇನೆ.
ಅಡಿ ಟಿಪ್ಪಣಿ: ಹೆಚ್. ಬಸವರಾಜು (ರಾಜು) ಜಯನಗರದಲ್ಲಿ ಸರ್ಕ್ಯುಲೇಟಿಂಗ್ ಲೈಬ್ರರಿ ನಡೆಸುವ ಸಮಾಜ ಸೇವಕರು. ರಾಜ್‍ಕುಮಾರ್ ಕಟ್ಟಾ ಅಭಿಮಾನಿಯಾಗಿದ್ದ ರಾಜು, ಅಭಿಮಾನಿಗಳ ಸಂಘವೊಂದನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಯೋಜನೆಯೊಂದನ್ನು ಹಮ್ಮಿಕೊಂಡಿದ್ದರು. ನನ್ನನ್ನು ಕಾರ್ಯದರ್ಶಿ ಮಾಡುವ ಇಚ್ಛೆ ಅವರದಾಗಿತ್ತು. ರಾಜ್ ಅಭಿಮಾನಿಗಳ ಸಂಘದ ಬಗ್ಗೆ ಭಿನ್ನಾಭಿಪ್ರಾಯವಿದ್ದ ನಾನು, ಈ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ. ಇಬ್ಬರಿಗೂ ವಾಗ್ವಾದವಾಗಿತ್ತು. ಕೊನೆಗೆ ‘ಆಶಯ’ ಎಂಬ ಹೆಸರಿನ ಸೇವಾ ಸಂಸ್ಥೆಯೊಂದನ್ನು ಕಟ್ಟಿ, ಐದು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದೆವು, ನಾನು ಖಜಾಂಚಿಯಾಗಿದ್ದೆ.
ಜರ್ಮನ್ ತತ್ತ್ವಜ್ಞಾನಿ, ರಾಜ್ಯಶಾಸ್ತ್ರ ನಿಪುಣ, ಅರ್ಥಶಾಸ್ತ್ರ ಪಾರಂಗತ ಕಾರ್ಲ್ ಮಾರ್ಕ್ಸ್ ನಿಧನರಾಗಿ ನೂರು ವರ್ಷಗಳಾಯಿತು.
15-03-1983, ಮಂಗಳವಾರ
ನೂರು ವರ್ಷಗಳ ಹಿಂದೆ ಫ್ರೆಡರಿಕ್ ಏಂಗಲ್ಸ್ - ಮಾರ್ಕ್ಸ್‌ನ ಒಡನಾಡಿ - "ಜಗತ್ತಿನ ಜನಸಂಖ್ಯೆಯಲ್ಲಿ ಒಂದು ತಲೆ ಕಡಿಮೆಯಾಯಿತು. ಆದರೆ ಆ ತಲೆ ಈ ತಲೆಮಾರಿನ ಶ್ರೇಷ್ಟ ತಲೆ" ಎಂದು ಶೋಕಿಸಿದ್ದ.
ಅಡಿ ಟಿಪ್ಪಣಿ: ಕಮ್ಯುನಿಸಂ ಪ್ರಭಾವ ಗಾಢವಾಗಿದ್ದ ಕಾಲವದು. ‘ರಂಗಸಂಪದ’ದ ನಾಟಕಗಳನ್ನು ತಪ್ಪದೇ ಒದುತ್ತಾ, ನವಕರ್ನಾಟಕ ಪಬ್ಲಿಕೇಶನ್ಸ್‍ನ ಕೆಲವೊಂದು ‘ಅಗ್ಗದ ಬೆಲೆಯ’ ಪುಸ್ತಕಗಳನ್ನು ಖರೀದಿಸಿ, ಅರ್ಧಬಂರ್ಧ ಓದಿ ಚರ್ಚಿಸುತ್ತಿದ್ದ ದಿನಗಳವು.
No comments:
Post a Comment