12-09-1977, ಸೋಮವಾರ
ಗೆಳೆಯ ಮಂಗಳೂರಿನ ವೆಂಕಟೇಶ ಮೂರ್ತಿಗೂ ನನಗೂ ವಾದ ನಡೆಯಿತು. ಅವನು ಇಂದಿರಾ (ಗಾಂಧಿ), ಟಿ.ಎ.ಪೈ ಮುಂತಾದವರ ಬಗ್ಗೆ ಮಾತನಾಡಿದ. ಕೋ.ಶಿವರಾಮ ಕಾರಂತರನ್ನು ಬೈದ. ನನಗೂ ರೇಗಿತು. ನಾನು ’ಕಡಲ ಕರೆಯ ಭಾರ್ಗವ ಕಾರಂತ’ರ ಬಗ್ಗೆ ಯಾವಾಗಲೂ ಗೌರವ ತಳೆದಿರುವವನು. ಹೀನ, ಅಶ್ಲೀಲ ಪದಗಳನ್ನು ಉಪಯೋಗಿಸಿದ. ಬೇಸರವಾಯಿತು. ಮನೆಗೆ ತೆರಳಿದೆ.
ಒಬ್ಬ ಧೀಮಂತ ವ್ಯಕ್ತಿಯ ಕಡೆಗೆ ಕನ್ನಡಿಗರ ಗೌರವ ಇಷ್ಟೆಯೆ? ಎಂದು ಮನದಲ್ಲಂದುಕೊಂಡೆ.
ಅಡಿ ಟಿಪ್ಪಣಿ: (ವೆಂಕಟೇಶ ಮೂರ್ತಿ ಎಲ್ಲಿದ್ದಾನೊ ಈಗ ಗೊತ್ತಿಲ್ಲ. ಎರಡನೆಯ ಪಿ.ಯು.ಸಿ. ಮುಗಿಸುವ ಸಮಯದಲ್ಲಿ ಅವನದು ಇಡೀ ವಿಜಯ ಕಾಲೇಜಿಗೆ ಅತಿ ಹೆಚ್ಚಿನ ಅಂಕಗಳು (532/600). ನಂತರದ ಸ್ಥಾನ ನನ್ನದಾಗಿತ್ತು (525/600). ಕನ್ನಡ (91/100) ವಿಷಯದಲ್ಲಿ ನನ್ನದು ಆ ವರ್ಷ ಇಡೀ ರಾಜ್ಯಕ್ಕೆ ಅತಿ ಹೆಚ್ಚಿನ ಅಂಕಗಳಾದರೆ, ಅವನದು ಎರಡನೆಯ ಅತಿ ಹೆಚ್ಚು ಅಂಕಗಳು. ನಮಗೆ ಕನ್ನಡ ಬೋಧಿಸಿದವರು ಡಾ|| ಪಿ.ವಿ.ನಾರಾಯಣ. ಅವನಿಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿತು. ನನಗೆ ಮಣಿಪಾಲ ಮೆಡಿಕಾಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿತು. ಅಂದಿನ ದಿನಗಳಲ್ಲಿ (1979) ತಿಂಗಳಿಗೆ 500 ರುಪಾಯಿಗಳ ಖರ್ಚು ಭರಿಸಲಾಗದ ಕಾರಣ, ವೈದ್ಯನಾಗದೆ ಎಂಜಿನಿಯರ್ ಆದೆ.)
14-09-1977, ಬುಧವಾರ
ವಿಠ್ಠಲ್ ಬಳಿ ‘ಜಗದೋದ್ಧಾರನಾ’ (ಕಾರಂತರ ಕಾದಂಬರಿ) ತೆಗೆದುಕೊಂಡೆ.
ಅಡಿ ಟಿಪ್ಪಣಿ: (ಆರ್. ವಿಜಯ ವಿಠ್ಠಲ್ ಮೈಸೂರಿನ ಆರ್.ನಿರ್ಮಲಾ (ವಿಚಾರವಾದಿ ರಾಮದಾಸ್ ಅವರ ಪತ್ನಿ) ಅವರ ತಮ್ಮ, ವಿಜಯ ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದ. ನಾನು ಯು.ವಿ.ಸಿ.ಇ. ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡೆ, ಅವನು ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್ ಸೇರಿದ. ನಂತರ ಇಂಡಿಯನ್ ಇನ್‍ಸ್ತಿಟ್ಯೂಟ್ ಆಫ್ ಸೈನ್ಸ್‍ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನಾ ಸಹವರ್ತಿಯಾಗಿದ್ದ. ಅವನು ಅಲ್ಲಿಯೇ ಎಂ.ಎಸ್‍ಸಿ. ಎಂಜಿನಿಯರಿಂಗ್ ಮುಗಿಸಿ ಇಸ್ರೋ ಸೇರಿದ. ನಾನು ಅರ್ಧಕ್ಕೇ ಸಂಶೋಧನೆ ಬಿಟ್ಟು ಡಿ.ಆರ್.ಡಿ.ಓ. ಸೇರಿದೆ. ಮುಂದೆ ಅವನು ಇಸ್ರೋ ಬಿಟ್ಟು ಎ.ಡಿ.ಎ. (ಏರೋನಾಟಿಕಲ್ ಡೆವಲೆಪ್‍ಮೆಂಟ್ ಏಜೆನ್ಸಿ) ಸೇರಿದ ನಂತರ ‘ತೇಜಸ್’ ಹಗುರ ಯುದ್ಧ ವಿಮಾನ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದೆವು. ನಾನು ಡಿ.ಆರ್.ಡಿ.ಓ. ಬಿಟ್ಟ ಸಮಯದಲ್ಲಿಯೇ (ಫೆಬ್ರವರಿ 2008) ಅವನೂ ಎ.ಡಿ.ಎ. ಬಿಟ್ಟು ಜನರಲ್ ಮೋಟಾರ್ಸ್‌ನ ಆರ್ ಅಂಡ್ ಡಿ ವಿಭಾಗ ಸೇರಿದ. ನಾನು ಎಚ್.ಎ.ಎಲ್. ಸೇರಿದೆ. ನಾನು ಎಚ್.ಎ.ಎಲ್. ಬಿಡುವ ಹೊತ್ತಿಗೆ ಅವನು ಜಿ.ಎಂ. ಬಿಟ್ಟು ಹೈದರಾಬಾದಿನ ಎಂ.ಎನ್.ಸಿ. ಸೇರಿದ್ದಾನೆ. ನಾನು ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ವಿಠ್ಠಲನ ಅಣ್ಣ ಡಾ||ಆರ್.ಕೃಷ್ಣಮೂರ್ತಿ ದಾವಣಗೆರೆಯ ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ನಾನು ಐ.ಐ.ಟಿ. ಮದ್ರಾಸಿನಲ್ಲಿ ಎಂ.ಟೆಕ್. ಕಲಿಯುವ ಸಮಯದಲ್ಲಿ ಅವರು ಅಲ್ಲಿಯೇ ತಮ್ಮ ಡಾಕ್ಟರೇಟ್ ವ್ಯಾಸಂಗ ಮಾಡುತ್ತಿದ್ದರು).
19-09-1977, ಸೋಮವಾರ
ಇಂದು ನನ್ನ ‘ತೂಕವೆಷ್ಟು?’ ಕರ್ಮವೀರದಲ್ಲಿ ಬಂದಿದೆ. ವೆಂಕಟೇಶ ಮೂರ್ತಿಯ ಜೊತೆ (ಮಂಗಳೂರಿನ ಬಗ್ಗೆ) ಜಗಳವಾಗಿ ಮಾತು ಬಿಟ್ಟೆ.
ಕಾರಂತರ ‘ಜಗದೋದ್ಧಾರ ... ನಾ ...’ ಎಂಬ ವ್ಯಂಗ್ಯ ತರ್ಕ-ವಿತರ್ಕಗಳ ಕಾದಂಬರಿ ಓದಿದೆ.
ಅಡಿ ಟಿಪ್ಪಣಿ: (ಕರ್ಮವೀರದ ಲೇಖನ ಬಹುಶಃ ವಿಜ್ಞಾನದ ತುಣುಕು ಸುದ್ದಿಯಾಗಿರಬಹುದು. ಆಗೆಲ್ಲಾ ಮನೆಗೆ ಬರುತ್ತಿದ್ದ ಸ್ಪ್ಯಾನ್, ಅಮೆರಿಕನ್ ರಿಪೋರ್ಟರ್, ಮಾಸ್ಕೋ ನ್ಯೂಸ್, ಜರ್ಮನ್ ನ್ಯೂಸ್ ಪ್ರಕಟಣೆಗಳಲ್ಲಿನ ವಿಜ್ಞಾನ ಸುದ್ದಿಗಳನ್ನು ಅನುವಾದಿಸಿ, ಸಂಗ್ರಹ ರೂಪದಲ್ಲಿ ಪತ್ರಿಕೆಗಳಿಗೆ ಕಳುಹಿಸುವ ಹವ್ಯಾಸವಿತ್ತು. ವೆಂಕಟೇಶ ಮೂರ್ತಿಯ ಜೊತೆ ಮಂಗಳೂರಿನ ಯಾವ ವಿಷಯದ ಬಗ್ಗೆ ಜಗಳವಾಯಿತೆಂದು ನೆನಪಿಲ್ಲ. ಆಗಿನ ಕಾಲದಲ್ಲಿಯೇ ಸಿಗರೇಟ್ ಹಚ್ಚುತ್ತಿದ್ದ ವೆಂಕಟೇಶ ಮೂರ್ತಿಯ ಜತೆ ಒಂದು ರೀತಿಯ love-hate ರಿಲೇಶನ್‍ಶಿಪ್ ಇತ್ತು. ದ್ವಿತೀಯ ಪಿ.ಯು.ಸಿ. ಮುಗಿಸುವ ಹೊತ್ತಿಗೆ ಪ್ರತಿಸ್ಫರ್ಧಿಯಾಗಿಯೂ ಆಪ್ತ ಮಿತ್ರನಾಗಿದ್ದ.)
21-09-1977, ಬುಧವಾರ
ಇಂದು ಬೆಂ.ವಿ.ವಿ.ಯ ಪುಸ್ತಕ ಪ್ರದರ್ಶನ ಮತ್ತು ಮಾರಾಟವಿತ್ತು. ದೇವರಿಗೆ/ತಿಂಡಿಗೆ/ಬಸ್ಸಿಗೆ 25 ಪೈ. ಹಾಕಲು ಹಿಂದೆ ಮುಂದೆ ನೋಡುವ ನಾನು ಬರಿಯ ಪುಸ್ತಕಗಳಿಗೆ ಕೆಳಕಂಡಂತೆ ಖರ್ಚು ಮಾಡಿದೆ.
Technology Transfer - ರು. 0.80
Future of Nuclear Technology - ರು. 1.60
Space Technology - ರು. 1.60
ಬೆಳಕಿನ ಸ್ವರೂಪ - ರು. 0.40
ದೂರದರ್ಶನ - ರು. 0.40
ಮಾನವ ಮತ್ತು ಪಾಚಿಗಳು - ರು. 0.40
ಮಾನವನ ಮೇಲೆ ಗ್ರಹಗಳ ಪ್ರಭಾವ ಉಂಟೆ? ರು. 0.40
ಅಂತರ್ಜಲ ರು. 0.40
ಅಡಿ ಟಿಪ್ಪಣಿ: (ಈ ಎಲ್ಲ ಪುಸ್ತಕಗಳನ್ನು ಅಂದು ಓದಿದ್ದೆನೊ, ಸುಮ್ಮನೆ ತಿರುವಿ ಹಾಕಿದ್ದೆನೊ, ಗೊತ್ತಿಲ್ಲ. ಅವುಗಳಲ್ಲಿ ಕೆಲವು ಪುಸ್ತಕಗಳು ನಾನು ಉಲ್ಲೇಖಿಸುತ್ತಿರುವ ಡೈರಿಯ ಜತೆಗೇ ಸಿಕ್ಕವು. 1985ರ ಜನವರಿಯಲ್ಲಿ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್‌ನಲ್ಲಿ ವಿಜ್ಞಾನಿ ಹುದ್ದೆಗಾಗಿ ಸಂದರ್ಶನಕ್ಕೆ ಹೋದಾಗ Space Technology ಪುಸ್ತಕ ಹೆಚ್ಚು ಉಪಯುಕ್ತವಾಗಿತ್ತು. ನೆನಪಿರುವಂತೆ ಪ್ರಾಧ್ಯಾಪಕ ಎನ್.ಕೆ.ನರಸಿಂಹ ಮೂರ್ತಿ ಅವರ ಮಾನವನ ಮೇಲೆ ಗ್ರಹಗಳ ಪ್ರಭಾವ ಉಂಟೆ? ಪುಸ್ತಕ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು)
No comments:
Post a Comment