19/20/21-01-1978; ಗುರುವಾರ/ಶುಕ್ರವಾರ/ಶನಿವಾರ
ಎರಡುಮೂರ್ದಿನದಿಂದ ಬರೀ ಯೂನಿಯನ್ ಡೇ ಗಲಾಟೆನೇ. ನಂಗೊಂದು ಕನ್ನಡ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದೆ ಎಂದು ತಿಳಿದಾಗ ಏನೋ ಒಂದು ರೀತಿಯ ಅವ್ಯಕ್ತ ಆನಂದ. ಮನೇಲಿ ಪ್ರೈಝ್ ತೊಗೊಂಡೇ ಸರ್ಪ್ರೈಸ್ ಮಾಡೋಣ ಎಂಬ ಹಂಬಲ.
ನಂ ಸೆಕ್ಷನ್ನಿನವರಿಮ್ದ ಒಂದು ಒಳ್ಳೇ scope ಪಡೆಯಲೂ ಛಾನ್ಸ್. ಮೊದಲನೇ ದಿನ 5 ಗಂಟೆ ಪ್ರೋಗ್ರಾಂಗೆ 4:10ಕ್ಕೇ ಹೋದ ಭೂಪ. 6:45ಕ್ಕೆ ಶುರುವಾದಾಗ ಬಲು ಬೇಜಾರು. ನಂ ಸೆಕ್ಷನ್ ಹುಡ್ಗೀರಿದಾರ ಅಂತ್ನೋಡಿದ್ರೆ ಒಬ್ರೂ ಪತ್ತೆ ಇಲ್ವಲ್ಲಾ. ನನ್ನ smartness ಎಲ್ಲಾ ನೀರ್ನಲ್ಲಿ ಹೋಮ. ಪ್ರೈಸ್‍ಗಳನ್ನು ಪೊಲೀಸ್ ಕಮೀಶನರ್ ಕೋದಂಡರಾಮಯ್ಯ ಕೊಡುತ್ತಿದ್ದಾಗ ಕೈಕಾಲೆಲ್ಲಾ ತಣ್ಣಗೆ. ಆದರೆ ಉಳಿದ ಪ್ರೈಸ್‍ಗಳನ್ನು ಮುಂದೆ ಕೊಡಲಾಗುವುದೆಂದಾಗ ಆಸೆಯ ಬಲೂನ್ ಟಪ್ ......... Monday prize collect ಮಾಡ್ಕೊಬೇಕೂ ಅಂದಾಗ ಬೇಸರ.
ಅಡಿ ಟಿಪ್ಪಣಿ: (ಹುಡುಗ-ಹುಡುಗಿಯರಿಬ್ಬರೂ ಕಲಿಯುತ್ತಿದ್ದ ಶಾಲೆಗಳಲ್ಲಿ ನನ್ನ ನರ್ಸರಿ, ಪ್ರೈಮರಿ, ಮಿಡ್ಲ್ ಸ್ಕೂಲ್ ವ್ಯಾಸಂಗ ನಡೆದವು. ಆದರೆ ಚಾಮರಾಜಪೇಟೆಯ ಬೆಂಗಳೂರು ಹೈಸ್ಕೂಲ್ ಸೇರಿದಾಗ ಅದು ಸಂಪೂರ್ಣ ಗಂಡುಪಾಳ್ಯ. ಕಾಲೇಜಿನಲ್ಲಿ ಹುಡುಗಿಯರನ್ನು ಮಾತನಾಡಿಸಲು ಸಂಕೋಚವೊಂದೇ ಕಾರಣವಾಗಿರಲಿಲ್ಲ, ಇಂಗ್ಲಿಷ್ ನೆಟ್ಟಗೆ ಬಾರದೆನ್ನುವ ಹೆದರಿಕೆಯೂ ಇತ್ತು. ಆ ಆತಂಕ ಈಗಲೂ ಇದೆ!)
21-01-1978; ಶನಿವಾರ
ಇಂದು ಮಧ್ಯಾಹ್ನ 3:30 ಸುಮಾರಿಗೆ ಸುಧೀರ್ ಮನೆಗೆ ಹೋಗಿ ಬರ್ತಿದ್ದೆ, NCERT guide ಇಸ್ಕೊಂಡು. ದಾರೀಲಿ ಜಯ್ (ವಿಜಯ ವಿಠ್ಠಲ) ಸಿಕ್ಕಿದ್ದ. ಅವ್ನು ನಂ ಮನೇಗೆ ಬಂದಿದ್ನಂತೆ. ನಾನು ಇಲ್ಲಿ ಅವನ್ಗೋಸ್ಕರ ಹುಡ್ಕೊಂಡು ಬಂದಿದ್ದೆ. ಕಡೆಗೆ ನಾನು ಮನೆಗೆ ಹೋಗ್ಬರ್ತೀನಿ, ಇಬ್ರೂ ಮುರಾರ್ಜಿ speech ಕೇಳಲು ಹೋಗುವಾ ಎಂದ್ಕೊಂಡು ಮನೆಗೆ ಬಂದೆ. ಮೂರ್ತಿ ಸ್ಕೂಟರ್‌ನಲ್ಲಿ southendನಲ್ಲಿ ಇಳಿದು 5 ಗಂಟೆಗೆ ಧೀರ್ (ಸುಧೀರ್) ಮನೆಗೆ ಹೋಗಿ, ಜಯ್ ಜೊತೆಗೆ cycleನಲ್ಲಿ doubles ಹೊಡ್ಕೊಂಡು ಅವರ್ಮನೆಗೆ ಹೋದೆ.
(ಮೀಟಿಂಗ್ ಮುಗಿದ ನಂತರ) ದಾರಿಯಲ್ಲಿ ಬಸ್ ಹತ್ತಿ third blockನಲ್ಲಿ ದುಡ್ಕೊಡದೇ ಇಳಿಯಹೋದಾಗ ಕಂಡಕ್ಟರ್‌ನಿಂದ ಶೇಪ್ (ಔಟ್)! ಮನೆಗೆ 9:15ಕ್ಕೆ ಬಂದೆ.
ಅಡಿ ಟಿಪ್ಪಣಿ: (ವಿಜಯ ಕಾಲೇಜಿನ ಎದುರು ರಸ್ತೆಯಲ್ಲೇ ವಾಸವಾಗಿದ್ದ ಟಿ.ಎಲ್. ಸುಧೀರ್ ನನ್ನ ಜತೆಗೇ ಪಿ.ಯು.ಸಿ. ಕಲಿತವನು. ಇಬ್ಬರ ಮನೆಯಲ್ಲೂ ಓದಲು ಪ್ರತ್ಯೇಕ ಜಾಗವಿರದ ಕಾರಣ ಸೌತ್‍ಎಂಡ್ ಸರ್ಕಲ್‍ನ ಸಿಟಿ ಸೆಂಟ್ರಲ್ ಲೈಬ್ರರಿ ಹಾಗೂ ಲಾಲ್‍ಬಾಗ್ ನಮ್ಮಿಬ್ಬರ ಕಂಬೈನ್ಡ್ ಸ್ಟಡಿ ಗೆ ನೆರವಾಗಿದ್ದವು. ಒಂದು ವರ್ಷ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿ, ಮರು ವರ್ಷ ಮೆಡಿಕಲ್ ಕಾಲೇಜಿಗೆ ಅಪ್ಲೈ ಮಾಡಿ, ಹುಬ್ಬಳ್ಳಿಯ ಕೆ.ಎಂ.ಸಿ. ಮೆಡಿಕಲ್ ಕಾಲೇಜಿನಲ್ಲಿ ಓದಿದ. ನಂತರ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ರೇಡಿಯಾಲಾಜಿ ವಿಶಯದಲ್ಲಿ ಎಂ.ಡಿ. ಪದವಿ ಗಳಿಸಿ ಅಲ್ಲಲ್ಲಿ ಕೆಲಸ ಮಾಡಿ ಈಗ ಮೈಸೂರಿನಲ್ಲಿ ಸ್ವಂತ ನರ್ಸಿಂಗ್ ಹೋಮ್ ತೆಗೆದಿದ್ದಾನೆ. ದಂತವೈದ್ಯೆಯನ್ನು ಮದುವೆಯಾಗಿದ್ದಾನೆ. ಕೆ.ಎಚ್.ನರಸಿಂಹ ಮೂರ್ತಿ ನನ್ನ ಕಸಿನ್, ಹಳೆಯ ಡೈರಿಗಳನ್ನು ಬರೆಯಲು ಒದಗಿಸುತ್ತಿದ್ದವರು.
ಆಗೆಲ್ಲಾ ಐದು ಹತ್ತು ಪೈಸೆ ಉಳಿಸಲು ಹೆಣಗಾಡುತ್ತಿದ್ದ ದಿನಗಳು. ಜಯನಗರ ಮೂರನೆಯ ಬ್ಲಾಕ್‍ನಿಂದ ಒಂಬತ್ತನೇ ಬ್ಲಾಕ್‍ಗೆ ಬಂದರೆ ಹತ್ತು ಪೈಸೆ ಟಿಕೆಟ್, ಒಂದು ಸ್ಟಾಪ್ ಮುಂದೆ ಬಂದು ನಾಲ್ಕನೇ ಬ್ಲಾಕ್‍ನಿಂದ ಹತ್ತಿದರೆ ಐದು ಪೈಸೆ ಟಿಕೆಟ್.)
22-01-1978; ಭಾನುವಾರ
ನಿನ್ನೆ ದಿನ ಕರ್ಮವೀರ (29/01/1978) ದಲ್ಲಿ ನನ್ನ ’ನಿಮಗೆ ಗೊತ್ತೆ, ಯಾವ ನಗರಗಳೆಂದು?’ ಪ್ರಕಟವಾಗಿರುವುದನ್ನು ಅನಿರೀಕ್ಷಿತವಾಗಿ ನೋಡಿದೆ.
ವೇಣು 4 ರುಪಾಯಿ ನಾಮ ಇಟ್ಟ.
ಅಡಿ ಟಿಪ್ಪಣಿ: (ಪತ್ರಿಕೆಗಳಿಗೆ ತುಣುಕು ಲೇಖನಗಳನ್ನು ಕಳುಹಿಸುವ ಮೂಲಕ ಆ ಕಾಲದಲ್ಲಿ ಎರಡು, ಮೂರು, ಐದು ರುಪಾಯಿಗಳ ಸಂಭಾವನೆ ಗಳಿಸುತ್ತಿದ್ದೆ. ಪೋಸ್ಟ್‍ಮ್ಯಾನ್ ರಾಘವೇಂದ್ರನಿಗೆ ಎಂಟಾಣೆ ಭಕ್ಷೀಸು ಕೊಡಬೇಕಿತ್ತು, ಎಂ.ಓ. ತಲುಪಿಸಲು. ನನ್ನ ಈ ಗಳಿಕೆಯನ್ನು ಎದುರು ರಸ್ತೆಯ ನಿರುದ್ಯೋಗಿ ಯುವಕ ವೇಣುಗೋಪಾಲ ಗಮನಿಸುತ್ತಿದ್ದ. ಆತ ರಾಗಿಗುಡ್ಡದ ಆಂಜನೇಯ ದೇವಸ್ಥಾನದಲ್ಲಿ ಹನುಮಜ್ಜಯಂತಿ ಸಂದರ್ಭದಲ್ಲಿ ಸ್ವಯಂಸೇವಕನಾಗಿ ಪರಿಚಿತ. ನಾನು ಹಿಂದೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ. ಹಲವಾರು ಜನರಿಗೆ ಸಾಲ ಹಿಂದಿರುಗಿಸದೆ ನಾಮ ಹಾಕಿರುವ ವಿಷಯ ನನಗೆ ಗೊತ್ತಿರಲಿಲ್ಲ. ಹೀಗೊಂದು ದಿನ ಸುಧಾ ಸಂಭಾವನೆ 5 ರುಪಾಯಿ ಸ್ವೀಕರಿಸುತ್ತಿರುವಾಗ ಅಮ್ಮನಿಗೆ ಹುಷಾರಿಲ್ಲವೆಂದು ಕಣ್ಣೀರು ಕರೆದು, 4 ರುಪಾಯಿ ನನ್ನಿಂದ ಸಾಲ ಪಡೆದಿದ್ದ.).
23-01-1978; ಸೋಮವಾರ
ಇಂದು Instituteನಲ್ಲಿ ’ಸುಧಾ’ (29/01/1978) ದಲ್ಲಿ ನನ್ನ ’ನಕ್ಷತ್ರಗಳು ಹೇಗೆ ಮಿನುಗುತ್ತವೆ’ ಪ್ರಕಟವಾಗಿದ್ದನ್ನು ನೋಡಿದೆ.
ಅಡಿ ಟಿಪ್ಪಣಿ: (ಪಿ.ಯು.ಸಿ. ಕಲಿಯುತ್ತಿದ್ದಾಗ ಗೆಳೆಯನೊಬ್ಬನ ತಂದೆ ಟೈಪ್‍ರೈಟಿಂಗ್ ಇನ್‍ಸ್ಟಿಟ್ಯೂಟ್ ಇಟ್ಟಿದ್ದರು. ಕಾಮರ್ಸ್ ಓದುತ್ತಿದ್ದ ಆತನಿಗೆ ಜತೆಯಾಗಿ ನಾನೂ ಟೈಪಿಂಗ್ ತರಗತಿಗೆ ಸೇರಿ ದೆ. ಎರಡು ವರ್ಷದಲ್ಲಿ ಜೂನಿಯರ್, ಸೀನಿಯರ್ ಪರೀಕ್ಷೆಗಳನ್ನು ಮುಗಿಸಿದಾಗ, ಅವನಿಗಿಂತಲೂ ಹೆಚ್ಚಿನ ಮಾರ್ಕ್ಸ್ ನನಗೆ ಬಂದಿತ್ತು. ಆ ಟೈಪ್‌ರೈಟಿಂಗ್ ಕಲಿಕೆ ಎಂಟು ವರ್ಷಗಳ ನಂತರ ಕಂಪ್ಯೂಟರ್ ಬಳಸಲು ನೆರವಾಗುವುದೆಂದು ಗೊತ್ತಿರಲಿಲ್ಲ.)
No comments:
Post a Comment