ಹಾಲ್-ದೊಡ್-ಡೈರಿ

Friday, August 20, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 11

09-02-1986; ಭಾನುವಾರ

ಸಂಜೆ ರಾಮರಾಯರ ಮನೆಯಲ್ಲಿ EC ಮೀಟಿಂಗ್. ತಪ್ಪಿಸಿಕೊಳ್ಳಲೆಂದೇ GATE ಬರೆಯಲು ಹೋದದ್ದು. ಅರ್ಧ-ಮುಕ್ಕಾಲು ಗಂಟೆಯ ನಂತರ ಹೊರಬಂದು ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರಕ್ಕೆ ಹೋಗಿ ಬಂದೆ. ಮಂದಾಕಿನಿಯನ್ನು ವೀಕ್ಷಿಸುವ ಬಹುದಿನದ ಬಯಕೆ ತೀರಿತು!

ಅಡಿ ಟಿಪ್ಪಣಿ: (ಸೇವಾಸಂಸ್ಥೆ ಅನಧಿಕೃತವಾಗಿ ಆರಂಭವಾಗಿತ್ತು, ಅದರ EC ಮೀಟಿಂಗ್‍ನಲ್ಲಿ ನಾನೇ ಕಾರ್ಯದರ್ಶಿಯಾಗಬೇಕೆಂಬ ನಿಲುವಳಿ ರಾಜು ಅವರದಾಗಿತ್ತು. ರಾಜು ನೇಪಥ್ಯದಿಂದ ಹಿಂದೆ ಸರಿದದ್ದು ನನಗೆ ಕೋಪ ತರಿಸಿತ್ತು. GATE - Graduates Aptitude Test in Engineering ಎಂಜಿನಿಯರಿಂಗ್‍ನಲ್ಲಿ ಪದವಿಯೋತ್ತರ ಅಧ್ಯಯನಕ್ಕೆ ಬೇಕಾದ ಪ್ರವೇಶ ಪರೀಕ್ಷೆ).

11-02-1986; ಮಂಗಳವಾರ

‘ಕೇಶವ ಶಿಲ್ಪಾ’ದಲ್ಲಿ ಬಿ.ಕೆ.ಎಸ್.ಐಯ್ಯಂಗಾರ್ ಬಗ್ಗೆ ಸಾಕ್ಷ್ಯ ಚಿತ್ರ ನೋಡಲು ಓಂಕಾರ್ ಕರೆದಾಗ ಮರುಮಾತಿಲ್ಲದೆಯೇ ಹೋದೆ.

ಅಡಿ ಟಿಪ್ಪಣಿ: (ಡಾ|| ಎಸ್.ಎನ್.ಓಂಕಾರ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಬೋಧನೆ ಮಾಡುತ್ತಿದ್ದಾನೆ. ಪಿ.ಯು.ಸಿ., ಬಿ.ಇ. ಯಲ್ಲಿ ಸಹಪಾಠಿಯಾಗಿದ್ದವನು, IIScಯಲ್ಲೂ ಸಹೋದ್ಯೋಗಿಯಾಗಿದ್ದ. ಮುಂದೆ ಅಲ್ಲಿಯೇ ಎಂ.ಎಸ್‍ಸಿ ಎಂಜಿನಿಯರಿಂಗ್, ಪಿಎಚ್.ಡಿ. ಮುಗಿಸಿ ಬೋಧನೆಗಿಳಿದ. ಅಂತಾರಾಷ್ಟೀಯ ಮಟ್ಟದಲ್ಲಿ ಯೋಗವಿಜ್ಞಾನದಲ್ಲಿ ಹೆಸರು ಮಾಡಿರುವವ. ಹಲವಾರು ವರ್ಷಗಳ ಕಾಲ ಉದಯ ಸೇರಿದಂತೆ ಅನೇಕ ಟೀವಿ ಚಾನೆಲ್‌ಗಳಲ್ಲಿ ಯೋಗವಿದ್ಯೆಯ ಬಗ್ಗೆ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಈತನೇ ಯೋಗ ಗುರು!).

16-02-1986; ಭಾನುವಾರ

ಇಂದು ‘ಆಶಯ’ ಚುನಾವಣೆ. ಏನು ಸ್ವಾರಸ್ಯವಿಲ್ಲದೆ ನೀರಸ. ಅವಿರೋಧ ಆಯ್ಕೆ. ರಾಜು ನಾಮಪತ್ರ ಸಲ್ಲಿಸದಿರುವಿಕೆ.
‘ಶಾಲಿನಿ’ಯ ಭೋಜನ (ನಾನಂತೂ ಹೋಗಲಿಲ್ಲ - ಕೆಟ್ಟ ಹಟದಿಂದ.

ನನ್ನ ಈ ಕೃತ್ಯದಿಂದ ಏನನ್ನಾದರೂ ಸಾಧಿಸಿದೆನೆ?

ನಂತರ ವಸಂತಪುರಕ್ಕೆ. ಅದೂ ಕೂಡಾ ಯಾವ ಬಗೆಯ ಸಂತಸವನ್ನು ತರಲಿಲ್ಲ.

ಅಡಿ ಟಿಪ್ಪಣಿ: (ರಾಜ್ ‍ಕುಮಾರ್ ಅಭಿಮಾನಿಗಳ ಸಂಘದ ಬದಲು ‘ಆಶಯ’ ಎಂಬ ಸೇವಾ ಸಂಸ್ಥೆ ಸ್ಥಾಪಿಸುವ ನಿರ್ಧಾರವಾಗಿತ್ತು. ಆದರೆ ಪ್ರೇರಕರಾಗಿದ್ದ ರಾಜು ಕೊನೆಯ ನಿಮಿಷದಲ್ಲಿ ಚುನಾವಣೆಯಿಂದ ಹಿಂದೆ ಸರಿದರು. ನಾನು ಖಜಾಂಚಿಯಾಗಿ ಆಯ್ಕೆಯಾಗಿದ್ದೆ. ರಾಜು ಕೈಕೊಟ್ಟ ಕಾರಣ, ಅವರು ಸ್ವಂತ ಖರ್ಚಿನಲ್ಲಿ ಏರ್ಪಡಿಸಿದ್ದ ಊಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

ದೊಡ್ಡಪ್ಪನ ಮಗ ಮುರುಳಿ ಬಂಧುಗಳೆಲ್ಲರನ್ನೂ ಕಟ್ಟಿಕೊಂಡು ವಸಂತಪುರಕ್ಕೆ ಹೋಗುವ ಒಂದು ಪಿಕ್ನಿಕ್ ಅದೇ ದಿನ ಅರೇಂಜ್ ಮಾಡಿದ್ದ)

23, 24, 25, 26, 27-06-1986

ದಿಪಾರ್ಟ್‍ಮೆಂಟ್‍ಗೆ ಹೊಸ ಹುಡುಗಿಯ ಆಗಮನ. ಬೆಳಗ್ಗೆ ಡಿಪಾರ್ಟ್‍ಮೆಂಟ್‍ಗೆ ಬಂದಾಗ ಹೈಸ್ಕೂಲ್ ಹುಡುಗಿಯಂತಿದ್ದ ಸ್ಕರ್ಟ್‍ಧಾರಿ, ಚಿತ್ರಾಳ ಹತ್ತಿರ ನಿಂತಿದ್ದವಳು ಯಾರಿರಬಹುದು? ಎಂದು ಊಹಿಸುತ್ತಿದ್ದೆ. ಕಾಫಿ ಕುಡಿಯುವಾಗ ಚಿತ್ರಾ ಪರಿಚಯ ಮಾಡಿಸಿದಳು. ವಿಜಯ ಕುಮಾರ್‌ನ ರಜೆಯಲ್ಲಿ ಬಂದಿರುವ ಟೆಂಪರರಿ ಟೈಪಿಸ್ಟ್. ತೆಳ್ಳಗೆ, ಬೆಳ್ಲಗೆ, ಮುಗ್ಧ ನಗೆಯ ಚುರುಕುಗಣ್ಣಿನ ಚೆಲುವೆ. ಮೊದಲ ದಿನ ಅಷ್ಟೊಂದು ಮಾತನಾಡಲಿಲ್ಲ. ದಿನಕಳೆದಂತೆ ‘ಸ್ವಾತಿ’ ಗಾಢವಾಗಿ ಮನಸ್ಸನ್ನಾಕ್ರಮಿಸಿಕೊಳ್ಳುತ್ತಿದ್ದಾಳೇನೋ ಎಂದು ಭಯವಾಗುತ್ತದೆ. ಮನೆಗೆ ಹೋಗುವಾಗ ‘ಬಾಯ್, ದೆನ್’ ಎಂದರೆ ಎದೆ ಚಿಮ್ಮಿತು ಝಲ್ಲನೆ! ಹುಡುಗಿ ಎಳಸಾಗಿ ಕಾಣಿಸಿದರೂ ಬುದ್ಧಿವಂತೆ. ಚುರುಕು. ಕಲಿಯುವುದರಲ್ಲಿ ಆಸಕ್ತಿ.

ಅಡಿ ಟಿಪ್ಪಣಿ: (
ಸ್ವಾತಿ ಪ್ರಭಾ ಅಚಾನಕ್ ಆಗಿ ಡಿಪಾರ್ಟ್‍ಮೆಂಟ್‍ಗೆ ಬಂದ ತಾತ್ಕಾಲಿಕ ಟೈಪಿಸ್ಟ್. ನಮ್ಮಂಥ ಪಡ್ಡೆ ಹುಡುಗರ ಹೃದಯದಲ್ಲಿ ತರಂಗಗಳನ್ನೇಳಿಸುತ್ತಿದ್ದ, ತೆಳ್ಳಗೆ, ಬೆಳ್ಳಗೆ ಲಕ್ಷ್ಜಣವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಹುಡುಗಿ. ಅಂದು ಮದುವೆಯ ಸಂದರ್ಭದಲ್ಲಿ ಬಿಟ್ಟರೆ ಮತ್ತೆ ನೋಡಿಲ್ಲ
).

16-07-1986; ಬುಧವಾರ

ಇಂದು ರಾಮಚಂದ್ರ ಭಟ್ ಹಾಗೂ ಚಿತ್ರಾ ಮದುವೆ. ಇಬ್ಬರ ಮನೆಯ ವಿರೋಧದೊಂದಿಗೆ ಬಸವನಗುಡಿಯಲ್ಲಿ ಸರಳ ಮದುವೆ ನಡೆಯಿತು. ಕೊಂಚ ಹೆಚ್ಚಾಗಿ ಓಡಾಡಿದೆ. ಮದುವೆಯ ಸಿಹಿಗೆ ನಾನೇ ದುಡ್ಡು ಕೊಟ್ಟೆ. ‘ಸ್ವಾತಿ’ ಕೂಡಾ ಮದುವೆಗೆ ಬಂದಿದ್ದಳು. ದೇವಸ್ಥಾನದ ಹೊರಗೆ ನಿಂತಿದ್ದವನನ್ನು

`Is everything over?' ಎಂದು ಕೇಳಿದಾಗ

‘No, it is still going on' ಎಂದೆ.

‘How's life?' ಎಂದಳು.

‘As usual, fantastic' ಎಂದೆ.

‘Have you already left the Department?' ಎಂದು ಕೇಳಿದೆ.

‘Oh, long back' ಎಂದಳು.

‘Why?' ಎಂಬ ಮರು ಪ್ರಶ್ನೆ.

‘Eh, there are typists who are already superfluous'

`Even, I am leaving the Department shortly'

`Oh, for that DRDL job, isn't it?'

`Ya!'

`Then people here will miss you'.

`Really, how come?'

`You were so close to most of the people, know'

...........

ಹೀಗೇ 5 ನಿಮಿಷ ಮಾತನಾಡಿ, ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸಿ ಮಿಂಚಿ ಮರೆಯಾದಳು ಕುಸುಮ ಬಾಲೆ.

ಮದುವೆಯ ನಂತರದ ಘಟನೆಗಳೆಲ್ಲವೂ ಸಿನೀಮಯವಾಗಿದ್ದವು.

ಅಡಿ ಟಿಪ್ಪಣಿ: (ರಾಮಚಂದ್ರ ಭಟ್ ಇಂಡಿಯನ್ ಇನ್‍ಸ್ಟಿಟ್ಯೂಟ್‍ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭ್ಹಾಗದಲ್ಲಿ ಸಂಶೋಧನಾ ಸಹಾಯಕನಾಗಿದ್ದ. ಜತೆಗೆ ಪಿಎಚ್.ಡಿ.ಗೂ ನೋಂದಣಿ ಮಾಡಿದ್ದ. ಚಿತ್ರಾ ಡಿಪಾರ್ಟ್‍ಮೆಂಟ್‍ನಲ್ಲಿ ಟೈಪಿಸ್ಟ್. ಇಬ್ಬರ ಪ್ರೇಮ ವಿವಾಹಕ್ಕೆ ಮನೆಯವರು ಅಡ್ಡಿಯಾಗಿದ್ದರು. ಈಗ ಎರಡೂ ಕಡೆ ಸೌಹಾರ್ದ ಸಂಬಂಧವಿದೆ. ಇಬ್ಬರು ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. )

21-07-1986; ಸೋಮವಾರ

ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ DRDO Appointment Order ಬಂತು. ಹೈದರಾಬಾದ್‍ನ DRDLನಲ್ಲಿ ಪೋಸ್ಟಿಂಗ್ ಆಗಿದೆ. 15 ದಿನಗಳಷ್ಟು ಮಾತ್ರ ಸಮಯ ಕೊಟ್ಟಿರುವುದರಿಂದ ಸಾಧ್ಯವಾದಷ್ಟು ಬೇಗ ಕೆಲಸ ಮುಗಿಸಬೇಕು.


No comments: