03-01-1984; ಮಂಗಳವಾರ
Walt Disney's 'The Fox And The Hound' Cartoon filmಗೆ ಹೋಗಿದ್ದೆ. ಸಿಂಹ - ಸುಬ್ಬಿಯರ ಜೊತೆಗೆ
ಅಡಿ ಟಿಪ್ಪಣಿ: ಆಗೆಲ್ಲಾ ನಮಗೆ ವಾಲ್ಟ್ ಡಿಸ್ನಿ ಕಾರ್ಟೂನ್ ಫಿಲಂ ನೋಡುವ ಹುಚ್ಚು - ಈಗಲೂ ಹೋಗಿಲ್ಲ ಎನ್ನುವುದು ಬೇರೆಯ ಮಾತು. ಎಂಜಿನಿಯರಿಂಗ್ ಸಹಪಾಠಿ ಬಿ.ಎಲ್.ಪ್ರಸನ್ನ ಸಿಂಹ ಇದೀಗ್ ಟಿವಿಎಸ್ ಮೋಟಾರ್ ಕಂಪನಿಯ ಇಂಡೋನೇಶಿಯನ್ ಸಹೋದ್ಯಮದ ಅಧ್ಯಕ್ಷ-ನಿರ್ದೇಶಕ, ಹಿಂದೆ ಹೊಸೂರಿನ ಟಿವಿಎಸ್ ಮೋಟಾರ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ. ಜಿ.ವಿ.ಸುಬ್ರಹ್ಮಣ್ಯಂ ಟಾಟಾ ಬಿಪಿ ಸೋಲಾರ್ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದವನು ಸದ್ಯಕ್ಕೆ ಮುಂಬೈನ ರಿಲಯನ್ಸ್ ಎನರ್ಜಿಯಲ್ಲಿ ಜನರಲ್ ಮ್ಯಾನೇಜರ್. ಸೈಕಲ್ನಲ್ಲಿ ಒಟ್ಟಿಗೆ ಕಾಲೇಜು, ಸಿನಿಮಾ ಸುತ್ತುತ್ತಿದ್ದವರು. ಕಾಲೇಜಿಗೊಮ್ಮೆ ಸಿಂಹನ ಜೊತೆ ಡಬಲ್ ರೈಡಿಂಗ್ ಹೋಗುತ್ತಿದ್ದಾಗ ಶಿವಾಜಿ ಥೀಯೇಟರ್ ಮುಂದೆ ಪೊಲೀಸ್ ಹತ್ತಿರ ಸಿಕ್ಕಿಹಾಕಿಕೊಂಡಿದ್ದು ನೆನಪಿದೆ. ‘ಸುಬ್ಬಿ’ಯದು ಒಂದು ಬಗೆಯ ಇಂಟಲೆಕ್ಚ್ಯುಯಲ್ ಕಂಪನಿ. ’Seminar'ನಂಥ ಗಂಭೀರ ಮ್ಯಾಗಝಿನ್ ಅನ್ನು ಒಟ್ಟಾರೆ ಕೊಂಡು ವಾರಗಟ್ಟಲೆ ಅರ್ಧಂಬರ್ಧ ಅರ್ಥವಾದ ಲೇಖನಗಳನ್ನು ಚರ್ಚಿಸುತ್ತಿದ್ದೆವು. ’Gentleman', 'Business India', 'Frontline'ಗಳ ಹಳೆಯ ಪ್ರತಿಗಳನ್ನು ಹಿಂದೆ ಪ್ರಸ್ತಾಪಿಸಿದ ಲೈಬ್ರರಿ ರಾಜು ನಮಗೆ ಉಚಿತವಾಗಿ ಕೊಡುತ್ತಿದ್ದರು. ಲೈಬ್ರರಿಯ ರೆಗ್ಯುಲರ್ ವಿಸಿಟರ್ ಆಗಿದ್ದ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಆಗ ಇಂಡಿಯನ್ ಎಕ್ಸ್ಪ್ರೆಸ್ ರಿಪೋರ್ಟರ್ - ಈಗ ‘ದಿ ವೀಕ್’ ವಾರಪತ್ರಿಕೆಯ ದೆಹಲಿ ಸ್ಥಾನಿಕ ಸಂಪಾದಕರು) ನಮಗೆ ಆಗ ಪರಿಚಯವಾದರು.
14-01-1984; ಶನಿವಾರ
The best of Walt Disney's "True Life Adventures" ಚಿತ್ರಕ್ಕೆ ಹೋಗಿದ್ದೆ. ಸಿಂಹ - ಸುಬ್ಬಿಯರ ಜೊತೆಗೆ.
28-01-1984; ಶನಿವಾರ
"ಚಿತೆಗೂ ಚಿಂತೆ" ಚಿತ್ರ - ಸಿಂಹನ ಜೊತೆ.
30-01-1984; ಸೋಮವಾರ
ಹೊಸವರ್ಷದ ಮೊದಲನೆಯ ತಿಂಗಳು, ಅದೆಷ್ಟು ಬೇಗ ಕಳೆದು ಹೋಯಿತು. ತಿಂಗಳೊಂದು ದಿನದಂತೆ ಕಳೆದು ಹೋಗಿದ್ದು, ಈಗ ಅದರ ಪರಿಣಾಮದ ಬಗ್ಗೆ ಚಿಂತಿತನಾಗುತ್ತೇನೆ. ಏಪ್ರಿಲ್ನಲ್ಲೇ ಪರೀಕ್ಷೆ ನಡೆಯುವುದಾದರೆ ಬಹಳ ಕಷ್ಟ.
31-01-1984; ಮಂಗಳವಾರ
ಟಿಪಿಕಲ್ TP ಕೈಲಾಸಂ ನಾಟಕಕ್ಕೆ ಹೋಗಿದ್ದೆ. ‘ನ್ಯೂಟನ್’ ಜೊತೆಗೆ. ಬಹಳ ದಿನಗಳ ನಂತರ ನೋಡಿದ ನಾಟಕ. TP ಕೈಲಾಸಂ Life Style ಮತ್ತು ಅವರ ನಾಟಕಗಳ characters - ಹಾಡುಗಳು .. ಇವೆಲ್ಲವೂ ಸಿ.ಆರ್.ಸಿಂಹರವರ ಸಮರ್ಥ ಅಭಿನಯದಲ್ಲಿ ಸುಂದರವಾಗಿ ಮೂಡಿ ಬಂದಿದೆ.
ಅಡಿ ಟಿಪ್ಪಣಿ: ಬುದ್ಧಿವಂತ ಸಹಪಾಠಿ ಎನ್.ರಘುರಾಮ್ಗೆ ‘ನ್ಯೂಟನ್’ ಎಂಬ ಅಡ್ಡ ಹೆಸರು ಕೊಟ್ಟಿದ್ದೆವು. ಎಂಜಿನಿಯರಿಂಗ್ ಪ್ರಾಜೆಕ್ಟ್ನಲ್ಲಿ ನನ್ನ ಜೊತೆಗಾರನೂ ಆಗಿದ್ದ. ಅದೆಷ್ಟೋ ಸಿನಿಮಾಗಳಿಗೆ ಜೊತೆಯಾಗಿ ಬಂದಿದ್ದ. ಬ್ಲೂಸ್ಟಾರ್ ಕಂಪನಿಯಲ್ಲಿ ಕೆಲಸಕ್ಕಿದ್ದ. ಆರೇಳು ವರ್ಷಗಳ ಹಿಂದೆ ದಿಢೀರೆಂದು ತೀರಿಕೊಂಡ ಸುದ್ದಿ ಕೇಳಿ ಬಂತು.
01-02-1984; ಬುಧವಾರ
‘ಸುಖ ಸಂಸಾರಕ್ಕೆ 12 ಸೂತ್ರಗಳು’ ಚಿತ್ರಕ್ಕೆ ಸಿಂಹ - ನ್ಯೂಟನ್ ಜೊತೇಲಿ ಹೋಗಿದ್ದೆ.
11-02-1984; ಶನಿವಾರ
‘ನೋಡಿ ಸ್ವಾಮಿ, ನಾವಿರೋದು ಹೀಗೆ’ ಚಿತ್ರಕ್ಕೆ ನಾನೊಬ್ಬನೇ ಹೋಗಿದ್ದೆ.
ಅಡಿ ಟಿಪ್ಪಣಿ: ಆಗೆಲ್ಲಾ ಒಬ್ಬೊಬ್ಬನೇ ಸಿನಿಮಾ - ನಾಟಕಗಳಿಗೆ ಹೋಗುತ್ತಿದ್ದುದುಂಟು. ನೆನೆಸಿಕೊಂಡರೆ ಈಗ ಆಶ್ಚರ್ಯವಾಗುತ್ತದೆ.
15-02-1984; ಬುಧವಾರ
ಇಂದು IIScಯಿಂದ ‘ಗುರು’ ಮನೆಗೆ ಹೋಗಿದ್ದೆ, ಸಿಂಹ - ರಾಘವನ್ ಕೂಡ.
ಅಡಿ ಟಿಪ್ಪಣಿ: ಎಂಜಿನಿಯರಿಂಗ್ ಕಲಿಯುವಾಗ ಸಹಪಾಠಿಯಾಗಿದ್ದ ಡಿ.ಗುರುರಾಜ್ ಡ್ರಾಯಿಂಗ್ ವಿಷಯದಲ್ಲಿ ತೀರಾ ಬುದ್ಧಿವಂತ. ಪರೀಕ್ಷೆಗಳು ನಡೆಯುತ್ತಿದ್ದಾಗ ತಪ್ಪದೇ ಸಿನಿಮಾ ನೋಡುವ ಹವ್ಯಾಸ ಇದ್ದವ. ರಘುರಾಮ್, ರಾಘವನ್ ಮತ್ತು ಸಿಂಹನೊಂದಿಗೆ ಈತನೂ ನನ್ನ ಪ್ರಾಜೆಕ್ಟ್ ಮೇಟ್. ನನ್ನೊಟ್ಟಿಗೆ ಡಿ.ಆರ್.ಡಿ.ಓ. ಸೇರಿದ್ದ. ಹದಿನೆಂಟು ವರ್ಷ ಸೇವೆಯ ನಂತರ ಒಂದು ದಿನ ಬಾಸ್ ಜೊತೆ ಜಗಳವಾಡಿ ರಾಜಿನಾಮೆ ಎಸೆದು ಬಂದ. ಅಲ್ಲಲ್ಲಿ ಕೆಲಸ ಮಾಡಿ, ಮತ್ತೆ ಡಿ.ಆರ್.ಡಿ.ಓ. ಗೆ ಕಾಂಟ್ರಾಕ್ಟ್ ಮೆಲೆ ಕೆಲಸಕ್ಕೆ ಸೇರಿದ್ದ. ನಾಲ್ಕು ವರ್ಷಗಳ ಹಿಂದೆ ತೀರಿಕೊಂಡ. ರಘುರಾಮ್ (ನ್ಯೂಟನ್)ನಂತೆಯೇ ಈತನೂ ಬ್ರಹ್ಮಚಾರಿಯಾಗಿದ್ದ. ಅವನಂತೆಯೇ ತೀವ್ರ ಮದ್ಯಪಾನ ವ್ಯಸನಕ್ಕೆ ಒಳಗಾಗಿ ಆರೋಗ್ಯ ಕೆಡಿಸಿಕೊಂಡಿದ್ದ.
17-02-1984; ಶುಕ್ರವಾರ
Hill Top Mountaineering Groupನ ಕಾರ್ಯದರ್ಶಿ ಶಿವಶಂಕರ್ಗೆ ಭಾನುವಾರ ಮದುವೆ. ಶಿವಮೊಗ್ಗೆಯಲ್ಲಿ. ಹೋಗಿ ಬರುವ ಆಕಾಂಕ್ಷೆಯಿಟ್ಟುಕೊಂಡಿದ್ದೆ. ಸದ್ಯದ ವಾತಾವರಣದಲ್ಲಿ ಎತ್ತ ಹೋಗಲೂ ಮನಸ್ಸಿಲ್ಲ.
ಅಡಿ ಟಿಪ್ಪಣಿ: ಸಹಪಾಠಿ ರಾಘವನ್ ಅವರ ಚಿಕ್ಕಪ್ಪ ಡಾ||ಎನ್.ಎಸ್.ಕಿರಣ್ ಏರೋಡೈನಮಿಕ್ಸ್ ವಿಷಯದಲ್ಲಿ ಅಮೆರಿಕದಲ್ಲಿ ಪಿಎಚ್.ದಿ. ಮಾಡಿದ್ದವರು. ಎಚ್.ಎ.ಎಲ್.ನ ವಿಮಾನ ಹಾರಾಟ ಪರೀಕ್ಷಾ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಅವರ ಪ್ರೇರಣೆಯಿಂದ ಸ್ಥಾಪನೆಯಾದ ಮೌಂಟನೀರಿಂಗ್ ಕ್ಲಬ್ ನಮ್ಮನ್ನು ರಾಮನಗರದತ್ತ ಸೆಳೆಯುತ್ತಿತ್ತು. ಬಿಡಡಿಯಿಂದ ರಾಮನಗರಕ್ಕೆ ಟ್ರೆಕಿಂಗ್ ಮಾಡಿ ರಾಮನಗರದಲ್ಲಿ ರಾಕ್ ಕ್ಲೈಂಬ್ ಮಾಡಲು ಪ್ರಯತ್ನಿಸುತ್ತಿದ್ದೆವು.
31-03-1984; ಶನಿವಾರ
ನಿಜಕ್ಕೂ ನೆನಪಿಡಲೇ ಬೇಕಾದ ದಿನ. ಮಧ್ಯಾಹ್ನ 4 ಗಂಟೆಗೆ ನಿದ್ದೆ ಮಾಡ್ತಿದ್ದೆ. ಫೋನ್ ಬಂತು. ನಾಣಿ ಫೋನ್ ಮಾಡಿದ್ದ. ‘ಸುಧೀಂದ್ರ, result ಬಂದಿದೆ ಕಣೋ. ಬರ್ತೀಯಾ?’. ‘ಏನಾಯ್ತೋ?’ ‘ಎಲ್ಲಾ collegewise results announce ಮಾಡ್ಬಿಟ್ಟಿದ್ದಾರೋ, ಇಲ್ಲೇ ಬಂದ್ಬಿಡು ಗೊತ್ತಾಗತ್ತೆ’. ಎದೆ ಢವ, ಢವ ..... ನಿರೀಕ್ಷಿಸಿದ್ದಂತೆ ಫೇಲ್ ಆಗಿರ್ಬಹುದು. ಅದಕ್ಕೇ ಹೇಳ್ತಿಲ್ಲ. ‘ಸರಿ. ಬರ್ತೀನಿ. ನಿಂದೇನಾಯ್ತು?’ . ‘ಇಲ್ಲೇ ಬಾರೋ. ಎಲ್ಲಾ ಗೊತ್ತಾಗತ್ತೆ’. ‘ಸಿಂಹ ಇದಾನಾ?’ ‘ನೃಪತುಂಗ stall ಹತ್ರ ಹೆಲ್ಮೆಟ್ ಹಿಡ್ಕೊಂಡು ನಿಂತೀದಾನೆ’. ಸರಿ, ಹೊರಟೆ.
ಸತ್ತ ಹೆಣದ ಮುಖ. ಜೀವನವೇ ಬೇಸರ. ನನ್ನ ಮೇಲೇ ನನಗೆ ಕೋಪ. ತಲೆ ವಿಪರೀತ ಸಿಡಿಯತೊಡಗಿತು. ಸೆಂಟ್ರಲ್ ಕಾಲೇಜ್ ಬಳಿ ರಘು ‘congrats' ಎಂದಾಗ, ‘ತಮಾಷೆ ಮಾಡ್ಬೇಡ್ವೋ?’ ಎಂದೆ. ‘Distinction ಕಣೋ’. ‘ನಿಜ್ವಾಗ್ಲೂ? ನಾಣಿ ಏನೂ ಹೇಳ್ಲೇ ಇಲ್ಲ’.‘I swear, ನಮ್ಮ ತಾಯಾಣೆ’ ಎಂದ. ‘ನಿಂದೇನಾಯ್ತೋ?’ ‘2 subjects'. ಪಕ್ದಲ್ಲೇ ಇದ್ದ ಸುಧೀರ್ ವರ್ಮನ ರಿಸಲ್ಟ್ ಕೇಳ್ಲೇ ಇಲ್ಲ. ಸುಬ್ಬಿ-ನಾಣಿ-ಸಿಂಹ ಕೂತಿದ್ರು. ಸುಬ್ಬಿ - ‘ಯಾಕೋ, ಚೆನ್ನಾಗಿ ಮಾಡಿರ್ಲಿಲ್ವಾ?’. ‘ಯಾವ್ದು, Designಆ, ಹೋಗ್ಲಿ ಬಿಡು’. ‘ನಿಂದೆಲ್ಲಾ ಏನಾಯ್ತು?’ . ‘ಎಲ್ಲಾ distinction'. ಸರಿ, ಸಪ್ಪೆ ಮೊಗದಿಂದಲೇ ಎಲ್ರಿಗೂ ಕೈಕೊಟ್ಟೆ.
ಸಿಂಹ - ‘ಅಲ್ವೇನೋ, ನೀನೇ ಹೇಳ್ತಿದ್ದ ಹಾಗೇ ....’ ಎಂದು ನಕ್ಕಾಗ ‘ಏನೆಂದು ಉತ್ತರಿಸಲಿ .....?’. ‘ಮತ್ತೆ ರಘು distinction ಅಂದ್ನಲ್ಲೋ?’. ‘ಸುಮ್ನೆ ಯಾಕೆ ಎಲ್ರಿಗೂ ಹೇಳೋದು ಅಂತ distinction ಅಂತ ಅನ್ಬಿಟ್ವಿ’.
ಆಮೇಲೆ ಸುಬ್ಬಿ ನಗುತ್ತಾ ಕೈಕೊಟ್ಟ ‘ಏ ಡಿಸ್ಟಿಂಕ್ಷ್ಜನ್ ಕಣೋ’್ - ಸುಮ್ನೆ ಫೂಲ್ ಮಾಡೋಣಾಂತ ಈ ಸಿಂಹ ಮಾಡಿದ ಕೆಲ್ಸ’.
‘ನಿಜ್ವಾಗ್ಲೂನಾ’ ಅಂತ result sheet ನೋಡ್ದಾಗ ‘ಅಬ್ಬ, DISTINCTION' ಎಂದೆ.
I am the most happiest person in this world!!
ಅಡಿ ಟಿಪ್ಪಣಿ: ಒಂದು ರಿಸಲ್ಟ್ ಏನೆಲ್ಲಾ ಯೋಚನೆಗಳನ್ನು ತರುತ್ತಿತ್ತು? ಎಂದು ನಗು ಬರುತ್ತಿದೆ. ರಘು ಸದ್ಯಕ್ಕೆ ಕಾರ್ಪೊರೇಶನ್ನಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್. ಅವರಪ್ಪ ಪೊಲೀಸ್ ಇಲಾಖೆಯಲ್ಲಿದ್ದರು, ಹೀಗಾಗಿ ಅವನು ನಮಗೆಲ್ಲಾ ಪೊಲೀಸ್ ರಘ್ ಎಂತಲೇ ಪರಿಚಯ. ನಾಣಿ ಅಲಿಯಾಸ್ ನಾರಾಯಣ ಸ್ವಾಮಿ ಕ್ಯಾಲಿಫೋರ್ನಿಯದಲ್ಲಿ ಸ್ವಂತ ಕಂಪನಿ ನಡೆಸುತ್ತಿದ್ದಾನೆ. 1997ರಲ್ಲಿ ಅವನ ಮನೆಗೆ ಭೇಟಿ ಕೊಟ್ಟಿದ್ದಾಗ ಈ result ಹಗರಣವನ್ನು ಹೆಂಡತಿಯ ಮುಂದೆ ನೆನಪಿಸಿಕೊಂಡು ನಕ್ಕಿದ್ದ. ಅಮೆರಿಕಕ್ಕೆ ಹೋಗುವ ಮೊದಲು ನಾರಾಯಣ ಸ್ವಾಮಿ ಚೆನ್ನಾಗಿಲ್ಲ ಅಂತ ಅರುಣ್ ಮಾಧವ್ ಅಂತ ಹೆಸರು ಬದಲಿಸಿಕೊಂಡ. ಈಗ ನಮಗೆಲ್ಲರಿಗೂ ನಾಣಿ ಮಾಧವ್ ಆಗಿದ್ದಾನೆ!