ಹಾಲ್-ದೊಡ್-ಡೈರಿ

Friday, August 20, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 12

17-12-1980; ಬುಧವಾರ

‘ಸ್ವಾಗತ್’ನಲ್ಲಿ Swarm ಚಿತ್ರ. ಸಿಂಹ, ಭಾಸ್ಕರ್ ಜೊತೆಗೆ.

19-12-1980; ಶುಕ್ರವಾರ

‘ಸಂಕ’ ಪುನರಾರಂಭ

ಅಡಿ ಟಿಪ್ಪಣಿ: (ತಂದೆ ಸುದ್ದಿ ಸಂಪಾದಕರಾಗಿದ್ದ ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯನ್ನು ಮಾಲಿಕ ಹೆಚ್.ಆರ್.ಬಸವರಾಜ್ 31-01-1980 ಹಠಾತ್ ಆಗಿ ಮುಚ್ಚಿದ್ದರು. ಸಂಯುಕ್ತ ಕರ್ನಾಟಕ ನೌಕರರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಹೋರಾಟ ಹಾಗೂ ಕೆ.ಶಾಮರಾವ್ ಅವರು ನ್ಯಾಯಾಲಯದ ಮೂಲಕ ನಡೆಸಿದ ಹೋರಾಟ ಜತೆಗೆ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರಿಗಿದ್ದ ಆಸಕ್ತಿಯಿಂದ ಪತ್ರಿಕೆ ಪುನಾರಂಭಗೊಂಡಿತು).

22-12-1980; ಸೋಮವಾರ

‘ಸ್ವಾಗತ್’ನಲ್ಲಿ ‘ಮಿಥುನ’ ಚಿತ್ರ, ಪ್ರಾಣೇಸ್, ವಿಜಯ, ಆನಂದ ಜೊತೆಗೆ. ಬೋರ್ ಹೊಡಿಸಿದ ಚಿತ್ರ. ಬಾರಿನಲ್ಲೇ ಮುಗಿಯುವ ಚಿತ್ರ.

24-12-1980; ಬುಧವಾರ

‘ಸ್ವಾಗತ್’ನಲ್ಲಿ ‘ಪ್ರಾಣಿಗಳ ಪ್ರಪಂಚ’ ನೂನ್ ಶೋ, ಒಬ್ಬನೇ!



ನೆನಪು ಹಳೆಯದಾದರೇನು, ಮೆಲುಕು ನವನವೀನ - 11

09-02-1986; ಭಾನುವಾರ

ಸಂಜೆ ರಾಮರಾಯರ ಮನೆಯಲ್ಲಿ EC ಮೀಟಿಂಗ್. ತಪ್ಪಿಸಿಕೊಳ್ಳಲೆಂದೇ GATE ಬರೆಯಲು ಹೋದದ್ದು. ಅರ್ಧ-ಮುಕ್ಕಾಲು ಗಂಟೆಯ ನಂತರ ಹೊರಬಂದು ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರಕ್ಕೆ ಹೋಗಿ ಬಂದೆ. ಮಂದಾಕಿನಿಯನ್ನು ವೀಕ್ಷಿಸುವ ಬಹುದಿನದ ಬಯಕೆ ತೀರಿತು!

ಅಡಿ ಟಿಪ್ಪಣಿ: (ಸೇವಾಸಂಸ್ಥೆ ಅನಧಿಕೃತವಾಗಿ ಆರಂಭವಾಗಿತ್ತು, ಅದರ EC ಮೀಟಿಂಗ್‍ನಲ್ಲಿ ನಾನೇ ಕಾರ್ಯದರ್ಶಿಯಾಗಬೇಕೆಂಬ ನಿಲುವಳಿ ರಾಜು ಅವರದಾಗಿತ್ತು. ರಾಜು ನೇಪಥ್ಯದಿಂದ ಹಿಂದೆ ಸರಿದದ್ದು ನನಗೆ ಕೋಪ ತರಿಸಿತ್ತು. GATE - Graduates Aptitude Test in Engineering ಎಂಜಿನಿಯರಿಂಗ್‍ನಲ್ಲಿ ಪದವಿಯೋತ್ತರ ಅಧ್ಯಯನಕ್ಕೆ ಬೇಕಾದ ಪ್ರವೇಶ ಪರೀಕ್ಷೆ).

11-02-1986; ಮಂಗಳವಾರ

‘ಕೇಶವ ಶಿಲ್ಪಾ’ದಲ್ಲಿ ಬಿ.ಕೆ.ಎಸ್.ಐಯ್ಯಂಗಾರ್ ಬಗ್ಗೆ ಸಾಕ್ಷ್ಯ ಚಿತ್ರ ನೋಡಲು ಓಂಕಾರ್ ಕರೆದಾಗ ಮರುಮಾತಿಲ್ಲದೆಯೇ ಹೋದೆ.

ಅಡಿ ಟಿಪ್ಪಣಿ: (ಡಾ|| ಎಸ್.ಎನ್.ಓಂಕಾರ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಬೋಧನೆ ಮಾಡುತ್ತಿದ್ದಾನೆ. ಪಿ.ಯು.ಸಿ., ಬಿ.ಇ. ಯಲ್ಲಿ ಸಹಪಾಠಿಯಾಗಿದ್ದವನು, IIScಯಲ್ಲೂ ಸಹೋದ್ಯೋಗಿಯಾಗಿದ್ದ. ಮುಂದೆ ಅಲ್ಲಿಯೇ ಎಂ.ಎಸ್‍ಸಿ ಎಂಜಿನಿಯರಿಂಗ್, ಪಿಎಚ್.ಡಿ. ಮುಗಿಸಿ ಬೋಧನೆಗಿಳಿದ. ಅಂತಾರಾಷ್ಟೀಯ ಮಟ್ಟದಲ್ಲಿ ಯೋಗವಿಜ್ಞಾನದಲ್ಲಿ ಹೆಸರು ಮಾಡಿರುವವ. ಹಲವಾರು ವರ್ಷಗಳ ಕಾಲ ಉದಯ ಸೇರಿದಂತೆ ಅನೇಕ ಟೀವಿ ಚಾನೆಲ್‌ಗಳಲ್ಲಿ ಯೋಗವಿದ್ಯೆಯ ಬಗ್ಗೆ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಈತನೇ ಯೋಗ ಗುರು!).

16-02-1986; ಭಾನುವಾರ

ಇಂದು ‘ಆಶಯ’ ಚುನಾವಣೆ. ಏನು ಸ್ವಾರಸ್ಯವಿಲ್ಲದೆ ನೀರಸ. ಅವಿರೋಧ ಆಯ್ಕೆ. ರಾಜು ನಾಮಪತ್ರ ಸಲ್ಲಿಸದಿರುವಿಕೆ.
‘ಶಾಲಿನಿ’ಯ ಭೋಜನ (ನಾನಂತೂ ಹೋಗಲಿಲ್ಲ - ಕೆಟ್ಟ ಹಟದಿಂದ.

ನನ್ನ ಈ ಕೃತ್ಯದಿಂದ ಏನನ್ನಾದರೂ ಸಾಧಿಸಿದೆನೆ?

ನಂತರ ವಸಂತಪುರಕ್ಕೆ. ಅದೂ ಕೂಡಾ ಯಾವ ಬಗೆಯ ಸಂತಸವನ್ನು ತರಲಿಲ್ಲ.

ಅಡಿ ಟಿಪ್ಪಣಿ: (ರಾಜ್ ‍ಕುಮಾರ್ ಅಭಿಮಾನಿಗಳ ಸಂಘದ ಬದಲು ‘ಆಶಯ’ ಎಂಬ ಸೇವಾ ಸಂಸ್ಥೆ ಸ್ಥಾಪಿಸುವ ನಿರ್ಧಾರವಾಗಿತ್ತು. ಆದರೆ ಪ್ರೇರಕರಾಗಿದ್ದ ರಾಜು ಕೊನೆಯ ನಿಮಿಷದಲ್ಲಿ ಚುನಾವಣೆಯಿಂದ ಹಿಂದೆ ಸರಿದರು. ನಾನು ಖಜಾಂಚಿಯಾಗಿ ಆಯ್ಕೆಯಾಗಿದ್ದೆ. ರಾಜು ಕೈಕೊಟ್ಟ ಕಾರಣ, ಅವರು ಸ್ವಂತ ಖರ್ಚಿನಲ್ಲಿ ಏರ್ಪಡಿಸಿದ್ದ ಊಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

ದೊಡ್ಡಪ್ಪನ ಮಗ ಮುರುಳಿ ಬಂಧುಗಳೆಲ್ಲರನ್ನೂ ಕಟ್ಟಿಕೊಂಡು ವಸಂತಪುರಕ್ಕೆ ಹೋಗುವ ಒಂದು ಪಿಕ್ನಿಕ್ ಅದೇ ದಿನ ಅರೇಂಜ್ ಮಾಡಿದ್ದ)

23, 24, 25, 26, 27-06-1986

ದಿಪಾರ್ಟ್‍ಮೆಂಟ್‍ಗೆ ಹೊಸ ಹುಡುಗಿಯ ಆಗಮನ. ಬೆಳಗ್ಗೆ ಡಿಪಾರ್ಟ್‍ಮೆಂಟ್‍ಗೆ ಬಂದಾಗ ಹೈಸ್ಕೂಲ್ ಹುಡುಗಿಯಂತಿದ್ದ ಸ್ಕರ್ಟ್‍ಧಾರಿ, ಚಿತ್ರಾಳ ಹತ್ತಿರ ನಿಂತಿದ್ದವಳು ಯಾರಿರಬಹುದು? ಎಂದು ಊಹಿಸುತ್ತಿದ್ದೆ. ಕಾಫಿ ಕುಡಿಯುವಾಗ ಚಿತ್ರಾ ಪರಿಚಯ ಮಾಡಿಸಿದಳು. ವಿಜಯ ಕುಮಾರ್‌ನ ರಜೆಯಲ್ಲಿ ಬಂದಿರುವ ಟೆಂಪರರಿ ಟೈಪಿಸ್ಟ್. ತೆಳ್ಳಗೆ, ಬೆಳ್ಲಗೆ, ಮುಗ್ಧ ನಗೆಯ ಚುರುಕುಗಣ್ಣಿನ ಚೆಲುವೆ. ಮೊದಲ ದಿನ ಅಷ್ಟೊಂದು ಮಾತನಾಡಲಿಲ್ಲ. ದಿನಕಳೆದಂತೆ ‘ಸ್ವಾತಿ’ ಗಾಢವಾಗಿ ಮನಸ್ಸನ್ನಾಕ್ರಮಿಸಿಕೊಳ್ಳುತ್ತಿದ್ದಾಳೇನೋ ಎಂದು ಭಯವಾಗುತ್ತದೆ. ಮನೆಗೆ ಹೋಗುವಾಗ ‘ಬಾಯ್, ದೆನ್’ ಎಂದರೆ ಎದೆ ಚಿಮ್ಮಿತು ಝಲ್ಲನೆ! ಹುಡುಗಿ ಎಳಸಾಗಿ ಕಾಣಿಸಿದರೂ ಬುದ್ಧಿವಂತೆ. ಚುರುಕು. ಕಲಿಯುವುದರಲ್ಲಿ ಆಸಕ್ತಿ.

ಅಡಿ ಟಿಪ್ಪಣಿ: (
ಸ್ವಾತಿ ಪ್ರಭಾ ಅಚಾನಕ್ ಆಗಿ ಡಿಪಾರ್ಟ್‍ಮೆಂಟ್‍ಗೆ ಬಂದ ತಾತ್ಕಾಲಿಕ ಟೈಪಿಸ್ಟ್. ನಮ್ಮಂಥ ಪಡ್ಡೆ ಹುಡುಗರ ಹೃದಯದಲ್ಲಿ ತರಂಗಗಳನ್ನೇಳಿಸುತ್ತಿದ್ದ, ತೆಳ್ಳಗೆ, ಬೆಳ್ಳಗೆ ಲಕ್ಷ್ಜಣವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಹುಡುಗಿ. ಅಂದು ಮದುವೆಯ ಸಂದರ್ಭದಲ್ಲಿ ಬಿಟ್ಟರೆ ಮತ್ತೆ ನೋಡಿಲ್ಲ
).

16-07-1986; ಬುಧವಾರ

ಇಂದು ರಾಮಚಂದ್ರ ಭಟ್ ಹಾಗೂ ಚಿತ್ರಾ ಮದುವೆ. ಇಬ್ಬರ ಮನೆಯ ವಿರೋಧದೊಂದಿಗೆ ಬಸವನಗುಡಿಯಲ್ಲಿ ಸರಳ ಮದುವೆ ನಡೆಯಿತು. ಕೊಂಚ ಹೆಚ್ಚಾಗಿ ಓಡಾಡಿದೆ. ಮದುವೆಯ ಸಿಹಿಗೆ ನಾನೇ ದುಡ್ಡು ಕೊಟ್ಟೆ. ‘ಸ್ವಾತಿ’ ಕೂಡಾ ಮದುವೆಗೆ ಬಂದಿದ್ದಳು. ದೇವಸ್ಥಾನದ ಹೊರಗೆ ನಿಂತಿದ್ದವನನ್ನು

`Is everything over?' ಎಂದು ಕೇಳಿದಾಗ

‘No, it is still going on' ಎಂದೆ.

‘How's life?' ಎಂದಳು.

‘As usual, fantastic' ಎಂದೆ.

‘Have you already left the Department?' ಎಂದು ಕೇಳಿದೆ.

‘Oh, long back' ಎಂದಳು.

‘Why?' ಎಂಬ ಮರು ಪ್ರಶ್ನೆ.

‘Eh, there are typists who are already superfluous'

`Even, I am leaving the Department shortly'

`Oh, for that DRDL job, isn't it?'

`Ya!'

`Then people here will miss you'.

`Really, how come?'

`You were so close to most of the people, know'

...........

ಹೀಗೇ 5 ನಿಮಿಷ ಮಾತನಾಡಿ, ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸಿ ಮಿಂಚಿ ಮರೆಯಾದಳು ಕುಸುಮ ಬಾಲೆ.

ಮದುವೆಯ ನಂತರದ ಘಟನೆಗಳೆಲ್ಲವೂ ಸಿನೀಮಯವಾಗಿದ್ದವು.

ಅಡಿ ಟಿಪ್ಪಣಿ: (ರಾಮಚಂದ್ರ ಭಟ್ ಇಂಡಿಯನ್ ಇನ್‍ಸ್ಟಿಟ್ಯೂಟ್‍ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭ್ಹಾಗದಲ್ಲಿ ಸಂಶೋಧನಾ ಸಹಾಯಕನಾಗಿದ್ದ. ಜತೆಗೆ ಪಿಎಚ್.ಡಿ.ಗೂ ನೋಂದಣಿ ಮಾಡಿದ್ದ. ಚಿತ್ರಾ ಡಿಪಾರ್ಟ್‍ಮೆಂಟ್‍ನಲ್ಲಿ ಟೈಪಿಸ್ಟ್. ಇಬ್ಬರ ಪ್ರೇಮ ವಿವಾಹಕ್ಕೆ ಮನೆಯವರು ಅಡ್ಡಿಯಾಗಿದ್ದರು. ಈಗ ಎರಡೂ ಕಡೆ ಸೌಹಾರ್ದ ಸಂಬಂಧವಿದೆ. ಇಬ್ಬರು ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. )

21-07-1986; ಸೋಮವಾರ

ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ DRDO Appointment Order ಬಂತು. ಹೈದರಾಬಾದ್‍ನ DRDLನಲ್ಲಿ ಪೋಸ್ಟಿಂಗ್ ಆಗಿದೆ. 15 ದಿನಗಳಷ್ಟು ಮಾತ್ರ ಸಮಯ ಕೊಟ್ಟಿರುವುದರಿಂದ ಸಾಧ್ಯವಾದಷ್ಟು ಬೇಗ ಕೆಲಸ ಮುಗಿಸಬೇಕು.


Thursday, August 19, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 10

03-01-1984; ಮಂಗಳವಾರ

Walt Disney's 'The Fox And The Hound' Cartoon filmಗೆ ಹೋಗಿದ್ದೆ. ಸಿಂಹ - ಸುಬ್ಬಿಯರ ಜೊತೆಗೆ

ಅಡಿ ಟಿಪ್ಪಣಿ: ಆಗೆಲ್ಲಾ ನಮಗೆ ವಾಲ್ಟ್ ಡಿಸ್ನಿ ಕಾರ್ಟೂನ್ ಫಿಲಂ ನೋಡುವ ಹುಚ್ಚು - ಈಗಲೂ ಹೋಗಿಲ್ಲ ಎನ್ನುವುದು ಬೇರೆಯ ಮಾತು. ಎಂಜಿನಿಯರಿಂಗ್ ಸಹಪಾಠಿ ಬಿ.ಎಲ್.ಪ್ರಸನ್ನ ಸಿಂಹ ಇದೀಗ್ ಟಿವಿಎಸ್ ಮೋಟಾರ್ ಕಂಪನಿಯ ಇಂಡೋನೇಶಿಯನ್ ಸಹೋದ್ಯಮದ ಅಧ್ಯಕ್ಷ-ನಿರ್ದೇಶಕ, ಹಿಂದೆ ಹೊಸೂರಿನ ಟಿವಿಎಸ್ ಮೋಟಾರ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ. ಜಿ.ವಿ.ಸುಬ್ರಹ್ಮಣ್ಯಂ ಟಾಟಾ ಬಿಪಿ ಸೋಲಾರ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದವನು ಸದ್ಯಕ್ಕೆ ಮುಂಬೈನ ರಿಲಯನ್ಸ್ ಎನರ್ಜಿಯಲ್ಲಿ ಜನರಲ್ ಮ್ಯಾನೇಜರ್. ಸೈಕಲ್‍ನಲ್ಲಿ ಒಟ್ಟಿಗೆ ಕಾಲೇಜು, ಸಿನಿಮಾ ಸುತ್ತುತ್ತಿದ್ದವರು. ಕಾಲೇಜಿಗೊಮ್ಮೆ ಸಿಂಹನ ಜೊತೆ ಡಬಲ್ ರೈಡಿಂಗ್ ಹೋಗುತ್ತಿದ್ದಾಗ ಶಿವಾಜಿ ಥೀಯೇಟರ್ ಮುಂದೆ ಪೊಲೀಸ್ ಹತ್ತಿರ ಸಿಕ್ಕಿಹಾಕಿಕೊಂಡಿದ್ದು ನೆನಪಿದೆ. ‘ಸುಬ್ಬಿ’ಯದು ಒಂದು ಬಗೆಯ ಇಂಟಲೆಕ್ಚ್ಯುಯಲ್ ಕಂಪನಿ. ’Seminar'ನಂಥ ಗಂಭೀರ ಮ್ಯಾಗಝಿನ್ ಅನ್ನು ಒಟ್ಟಾರೆ ಕೊಂಡು ವಾರಗಟ್ಟಲೆ ಅರ್ಧಂಬರ್ಧ ಅರ್ಥವಾದ ಲೇಖನಗಳನ್ನು ಚರ್ಚಿಸುತ್ತಿದ್ದೆವು. ’Gentleman', 'Business India', 'Frontline'ಗಳ ಹಳೆಯ ಪ್ರತಿಗಳನ್ನು ಹಿಂದೆ ಪ್ರಸ್ತಾಪಿಸಿದ ಲೈಬ್ರರಿ ರಾಜು ನಮಗೆ ಉಚಿತವಾಗಿ ಕೊಡುತ್ತಿದ್ದರು. ಲೈಬ್ರರಿಯ ರೆಗ್ಯುಲರ್ ವಿಸಿಟರ್ ಆಗಿದ್ದ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಆಗ ಇಂಡಿಯನ್ ಎಕ್ಸ್‍ಪ್ರೆಸ್ ರಿಪೋರ್ಟರ್ - ಈಗ ‘ದಿ ವೀಕ್’ ವಾರಪತ್ರಿಕೆಯ ದೆಹಲಿ ಸ್ಥಾನಿಕ ಸಂಪಾದಕರು) ನಮಗೆ ಆಗ ಪರಿಚಯವಾದರು.

14-01-1984; ಶನಿವಾರ

The best of Walt Disney's "True Life Adventures" ಚಿತ್ರಕ್ಕೆ ಹೋಗಿದ್ದೆ. ಸಿಂಹ - ಸುಬ್ಬಿಯರ ಜೊತೆಗೆ.

28-01-1984; ಶನಿವಾರ

"ಚಿತೆಗೂ ಚಿಂತೆ" ಚಿತ್ರ - ಸಿಂಹನ ಜೊತೆ.

30-01-1984; ಸೋಮವಾರ

ಹೊಸವರ್ಷದ ಮೊದಲನೆಯ ತಿಂಗಳು, ಅದೆಷ್ಟು ಬೇಗ ಕಳೆದು ಹೋಯಿತು. ತಿಂಗಳೊಂದು ದಿನದಂತೆ ಕಳೆದು ಹೋಗಿದ್ದು, ಈಗ ಅದರ ಪರಿಣಾಮದ ಬಗ್ಗೆ ಚಿಂತಿತನಾಗುತ್ತೇನೆ. ಏಪ್ರಿಲ್‍ನಲ್ಲೇ ಪರೀಕ್ಷೆ ನಡೆಯುವುದಾದರೆ ಬಹಳ ಕಷ್ಟ.

31-01-1984; ಮಂಗಳವಾರ

ಟಿಪಿಕಲ್ TP ಕೈಲಾಸಂ ನಾಟಕಕ್ಕೆ ಹೋಗಿದ್ದೆ. ‘ನ್ಯೂಟನ್’ ಜೊತೆಗೆ. ಬಹಳ ದಿನಗಳ ನಂತರ ನೋಡಿದ ನಾಟಕ. TP ಕೈಲಾಸಂ Life Style ಮತ್ತು ಅವರ ನಾಟಕಗಳ characters - ಹಾಡುಗಳು .. ಇವೆಲ್ಲವೂ ಸಿ.ಆರ್.ಸಿಂಹರವರ ಸಮರ್ಥ ಅಭಿನಯದಲ್ಲಿ ಸುಂದರವಾಗಿ ಮೂಡಿ ಬಂದಿದೆ.

ಅಡಿ ಟಿಪ್ಪಣಿ: ಬುದ್ಧಿವಂತ ಸಹಪಾಠಿ ಎನ್.ರಘುರಾಮ್‍ಗೆ ‘ನ್ಯೂಟನ್’ ಎಂಬ ಅಡ್ಡ ಹೆಸರು ಕೊಟ್ಟಿದ್ದೆವು. ಎಂಜಿನಿಯರಿಂಗ್ ಪ್ರಾಜೆಕ್ಟ್‍ನಲ್ಲಿ ನನ್ನ ಜೊತೆಗಾರನೂ ಆಗಿದ್ದ. ಅದೆಷ್ಟೋ ಸಿನಿಮಾಗಳಿಗೆ ಜೊತೆಯಾಗಿ ಬಂದಿದ್ದ. ಬ್ಲೂಸ್ಟಾರ್ ಕಂಪನಿಯಲ್ಲಿ ಕೆಲಸಕ್ಕಿದ್ದ. ಆರೇಳು ವರ್ಷಗಳ ಹಿಂದೆ ದಿಢೀರೆಂದು ತೀರಿಕೊಂಡ ಸುದ್ದಿ ಕೇಳಿ ಬಂತು.

01-02-1984; ಬುಧವಾರ

‘ಸುಖ ಸಂಸಾರಕ್ಕೆ 12 ಸೂತ್ರಗಳು’ ಚಿತ್ರಕ್ಕೆ ಸಿಂಹ - ನ್ಯೂಟನ್ ಜೊತೇಲಿ ಹೋಗಿದ್ದೆ.

11-02-1984; ಶನಿವಾರ

‘ನೋಡಿ ಸ್ವಾಮಿ, ನಾವಿರೋದು ಹೀಗೆ’ ಚಿತ್ರಕ್ಕೆ ನಾನೊಬ್ಬನೇ ಹೋಗಿದ್ದೆ.

ಅಡಿ ಟಿಪ್ಪಣಿ: ಆಗೆಲ್ಲಾ ಒಬ್ಬೊಬ್ಬನೇ ಸಿನಿಮಾ - ನಾಟಕಗಳಿಗೆ ಹೋಗುತ್ತಿದ್ದುದುಂಟು. ನೆನೆಸಿಕೊಂಡರೆ ಈಗ ಆಶ್ಚರ್ಯವಾಗುತ್ತದೆ.

15-02-1984; ಬುಧವಾರ

ಇಂದು IIScಯಿಂದ ‘ಗುರು’ ಮನೆಗೆ ಹೋಗಿದ್ದೆ, ಸಿಂಹ - ರಾಘವನ್ ಕೂಡ.

ಅಡಿ ಟಿಪ್ಪಣಿ: ಎಂಜಿನಿಯರಿಂಗ್ ಕಲಿಯುವಾಗ ಸಹಪಾಠಿಯಾಗಿದ್ದ ಡಿ.ಗುರುರಾಜ್ ಡ್ರಾಯಿಂಗ್ ವಿಷಯದಲ್ಲಿ ತೀರಾ ಬುದ್ಧಿವಂತ. ಪರೀಕ್ಷೆಗಳು ನಡೆಯುತ್ತಿದ್ದಾಗ ತಪ್ಪದೇ ಸಿನಿಮಾ ನೋಡುವ ಹವ್ಯಾಸ ಇದ್ದವ. ರಘುರಾಮ್, ರಾಘವನ್ ಮತ್ತು ಸಿಂಹನೊಂದಿಗೆ ಈತನೂ ನನ್ನ ಪ್ರಾಜೆಕ್ಟ್ ಮೇಟ್. ನನ್ನೊಟ್ಟಿಗೆ ಡಿ.ಆರ್.ಡಿ.ಓ. ಸೇರಿದ್ದ. ಹದಿನೆಂಟು ವರ್ಷ ಸೇವೆಯ ನಂತರ ಒಂದು ದಿನ ಬಾಸ್ ಜೊತೆ ಜಗಳವಾಡಿ ರಾಜಿನಾಮೆ ಎಸೆದು ಬಂದ. ಅಲ್ಲಲ್ಲಿ ಕೆಲಸ ಮಾಡಿ, ಮತ್ತೆ ಡಿ.ಆರ್.ಡಿ.ಓ. ಗೆ ಕಾಂಟ್ರಾಕ್ಟ್ ಮೆಲೆ ಕೆಲಸಕ್ಕೆ ಸೇರಿದ್ದ. ನಾಲ್ಕು ವರ್ಷಗಳ ಹಿಂದೆ ತೀರಿಕೊಂಡ. ರಘುರಾಮ್ (ನ್ಯೂಟನ್)ನಂತೆಯೇ ಈತನೂ ಬ್ರಹ್ಮಚಾರಿಯಾಗಿದ್ದ. ಅವನಂತೆಯೇ ತೀವ್ರ ಮದ್ಯಪಾನ ವ್ಯಸನಕ್ಕೆ ಒಳಗಾಗಿ ಆರೋಗ್ಯ ಕೆಡಿಸಿಕೊಂಡಿದ್ದ.

17-02-1984; ಶುಕ್ರವಾರ

Hill Top Mountaineering Groupನ ಕಾರ್ಯದರ್ಶಿ ಶಿವಶಂಕರ್‌ಗೆ ಭಾನುವಾರ ಮದುವೆ. ಶಿವಮೊಗ್ಗೆಯಲ್ಲಿ. ಹೋಗಿ ಬರುವ ಆಕಾಂಕ್ಷೆಯಿಟ್ಟುಕೊಂಡಿದ್ದೆ. ಸದ್ಯದ ವಾತಾವರಣದಲ್ಲಿ ಎತ್ತ ಹೋಗಲೂ ಮನಸ್ಸಿಲ್ಲ.

ಅಡಿ ಟಿಪ್ಪಣಿ: ಸಹಪಾಠಿ ರಾಘವನ್ ಅವರ ಚಿಕ್ಕಪ್ಪ ಡಾ||ಎನ್.ಎಸ್.ಕಿರಣ್ ಏರೋಡೈನಮಿಕ್ಸ್ ವಿಷಯದಲ್ಲಿ ಅಮೆರಿಕದಲ್ಲಿ ಪಿಎಚ್.ದಿ. ಮಾಡಿದ್ದವರು. ಎಚ್.ಎ.ಎಲ್.ನ ವಿಮಾನ ಹಾರಾಟ ಪರೀಕ್ಷಾ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಅವರ ಪ್ರೇರಣೆಯಿಂದ ಸ್ಥಾಪನೆಯಾದ ಮೌಂಟನೀರಿಂಗ್ ಕ್ಲಬ್ ನಮ್ಮನ್ನು ರಾಮನಗರದತ್ತ ಸೆಳೆಯುತ್ತಿತ್ತು. ಬಿಡಡಿಯಿಂದ ರಾಮನಗರಕ್ಕೆ ಟ್ರೆಕಿಂಗ್ ಮಾಡಿ ರಾಮನಗರದಲ್ಲಿ ರಾಕ್ ಕ್ಲೈಂಬ್ ಮಾಡಲು ಪ್ರಯತ್ನಿಸುತ್ತಿದ್ದೆವು.

31-03-1984; ಶನಿವಾರ

ನಿಜಕ್ಕೂ ನೆನಪಿಡಲೇ ಬೇಕಾದ ದಿನ. ಮಧ್ಯಾಹ್ನ 4 ಗಂಟೆಗೆ ನಿದ್ದೆ ಮಾಡ್ತಿದ್ದೆ. ಫೋನ್ ಬಂತು. ನಾಣಿ ಫೋನ್ ಮಾಡಿದ್ದ. ‘ಸುಧೀಂದ್ರ, result ಬಂದಿದೆ ಕಣೋ. ಬರ್ತೀಯಾ?’. ‘ಏನಾಯ್ತೋ?’ ‘ಎಲ್ಲಾ collegewise results announce ಮಾಡ್ಬಿಟ್ಟಿದ್ದಾರೋ, ಇಲ್ಲೇ ಬಂದ್ಬಿಡು ಗೊತ್ತಾಗತ್ತೆ’. ಎದೆ ಢವ, ಢವ ..... ನಿರೀಕ್ಷಿಸಿದ್ದಂತೆ ಫೇಲ್ ಆಗಿರ್ಬಹುದು. ಅದಕ್ಕೇ ಹೇಳ್ತಿಲ್ಲ. ‘ಸರಿ. ಬರ್ತೀನಿ. ನಿಂದೇನಾಯ್ತು?’ . ‘ಇಲ್ಲೇ ಬಾರೋ. ಎಲ್ಲಾ ಗೊತ್ತಾಗತ್ತೆ’. ‘ಸಿಂಹ ಇದಾನಾ?’ ‘ನೃಪತುಂಗ stall ಹತ್ರ ಹೆಲ್ಮೆಟ್ ಹಿಡ್ಕೊಂಡು ನಿಂತೀದಾನೆ’. ಸರಿ, ಹೊರಟೆ.

ಸತ್ತ ಹೆಣದ ಮುಖ. ಜೀವನವೇ ಬೇಸರ. ನನ್ನ ಮೇಲೇ ನನಗೆ ಕೋಪ. ತಲೆ ವಿಪರೀತ ಸಿಡಿಯತೊಡಗಿತು. ಸೆಂಟ್ರಲ್ ಕಾಲೇಜ್ ಬಳಿ ರಘು ‘congrats' ಎಂದಾಗ, ‘ತಮಾಷೆ ಮಾಡ್ಬೇಡ್ವೋ?’ ಎಂದೆ. ‘Distinction ಕಣೋ’. ‘ನಿಜ್ವಾಗ್ಲೂ? ನಾಣಿ ಏನೂ ಹೇಳ್ಲೇ ಇಲ್ಲ’.‘I swear, ನಮ್ಮ ತಾಯಾಣೆ’ ಎಂದ. ‘ನಿಂದೇನಾಯ್ತೋ?’ ‘2 subjects'. ಪಕ್ದಲ್ಲೇ ಇದ್ದ ಸುಧೀರ್ ವರ್ಮನ ರಿಸಲ್ಟ್ ಕೇಳ್ಲೇ ಇಲ್ಲ. ಸುಬ್ಬಿ-ನಾಣಿ-ಸಿಂಹ ಕೂತಿದ್ರು. ಸುಬ್ಬಿ - ‘ಯಾಕೋ, ಚೆನ್ನಾಗಿ ಮಾಡಿರ್ಲಿಲ್ವಾ?’. ‘ಯಾವ್ದು, Designಆ, ಹೋಗ್ಲಿ ಬಿಡು’. ‘ನಿಂದೆಲ್ಲಾ ಏನಾಯ್ತು?’ . ‘ಎಲ್ಲಾ distinction'. ಸರಿ, ಸಪ್ಪೆ ಮೊಗದಿಂದಲೇ ಎಲ್ರಿಗೂ ಕೈಕೊಟ್ಟೆ.

ಸಿಂಹ - ‘ಅಲ್ವೇನೋ, ನೀನೇ ಹೇಳ್ತಿದ್ದ ಹಾಗೇ ....’ ಎಂದು ನಕ್ಕಾಗ ‘ಏನೆಂದು ಉತ್ತರಿಸಲಿ .....?’. ‘ಮತ್ತೆ ರಘು distinction ಅಂದ್ನಲ್ಲೋ?’. ‘ಸುಮ್ನೆ ಯಾಕೆ ಎಲ್ರಿಗೂ ಹೇಳೋದು ಅಂತ distinction ಅಂತ ಅನ್ಬಿಟ್ವಿ’.

ಆಮೇಲೆ ಸುಬ್ಬಿ ನಗುತ್ತಾ ಕೈಕೊಟ್ಟ ‘ಏ ಡಿಸ್ಟಿಂಕ್ಷ್ಜನ್ ಕಣೋ’್ - ಸುಮ್ನೆ ಫೂಲ್ ಮಾಡೋಣಾಂತ ಈ ಸಿಂಹ ಮಾಡಿದ ಕೆಲ್ಸ’.

‘ನಿಜ್ವಾಗ್ಲೂನಾ’ ಅಂತ result sheet ನೋಡ್ದಾಗ ‘ಅಬ್ಬ, DISTINCTION' ಎಂದೆ.

I am the most happiest person in this world!!

ಅಡಿ ಟಿಪ್ಪಣಿ: ಒಂದು ರಿಸಲ್ಟ್ ಏನೆಲ್ಲಾ ಯೋಚನೆಗಳನ್ನು ತರುತ್ತಿತ್ತು? ಎಂದು ನಗು ಬರುತ್ತಿದೆ. ರಘು ಸದ್ಯಕ್ಕೆ ಕಾರ್ಪೊರೇಶನ್‍ನಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್. ಅವರಪ್ಪ ಪೊಲೀಸ್ ಇಲಾಖೆಯಲ್ಲಿದ್ದರು, ಹೀಗಾಗಿ ಅವನು ನಮಗೆಲ್ಲಾ ಪೊಲೀಸ್ ರಘ್ ಎಂತಲೇ ಪರಿಚಯ. ನಾಣಿ ಅಲಿಯಾಸ್ ನಾರಾಯಣ ಸ್ವಾಮಿ ಕ್ಯಾಲಿಫೋರ್ನಿಯದಲ್ಲಿ ಸ್ವಂತ ಕಂಪನಿ ನಡೆಸುತ್ತಿದ್ದಾನೆ. 1997ರಲ್ಲಿ ಅವನ ಮನೆಗೆ ಭೇಟಿ ಕೊಟ್ಟಿದ್ದಾಗ ಈ result ಹಗರಣವನ್ನು ಹೆಂಡತಿಯ ಮುಂದೆ ನೆನಪಿಸಿಕೊಂಡು ನಕ್ಕಿದ್ದ. ಅಮೆರಿಕಕ್ಕೆ ಹೋಗುವ ಮೊದಲು ನಾರಾಯಣ ಸ್ವಾಮಿ ಚೆನ್ನಾಗಿಲ್ಲ ಅಂತ ಅರುಣ್ ಮಾಧವ್ ಅಂತ ಹೆಸರು ಬದಲಿಸಿಕೊಂಡ. ಈಗ ನಮಗೆಲ್ಲರಿಗೂ ನಾಣಿ ಮಾಧವ್ ಆಗಿದ್ದಾನೆ!

ನೆನಪು ಹಳೆಯದಾದರೇನು, ಮೆಲುಕು ನವನವೀನ -9

20-02-1983, ಭಾನುವಾರ

ನಾಳೆ VIVA ಇದ್ರೂ ಸಹ "ಕವಿರತ್ನ ಕಾಳಿದಾಸ"ಕ್ಕೆ ಹೋಗಿದ್ದೆ - ರಾಜೂ ಕೃಪೆಯಿಂದ. ರಾಜೂಗೆ ಅನಗತ್ಯ ಬೇಸರ ಉಂಟು ಮಾಡಿ - ಜಗಳವಾಡಿದ್ದ ನೆನಪು ಇನ್ನೂ ಮಾಸಿಲ್ಲ. ಈ ಪರಿಸ್ಥಿತಿಯಲ್ಲಿ ಯಾವ ಕೃತಜ್ಞತೆಯನ್ನೂ ಅರ್ಪಿಸಲು ಸಾಧ್ಯವಾಗುತ್ತಿಲ್ಲ. "ತಪ್ಪಿತಸ್ಥ" ಭಾವನೆಯಿಂದ ಹೊರಬರಲು ತೊಳಲಾಡಿದೆ.

ಎಲ್ಲ ರೀತಿಯಿಂದಲೂ ಒಂದು ಉತ್ತಮ ಚಿತ್ರ ನೋಡಲು (ಅದರಲ್ಲೂ ರಾಜ್ ಚಿತ್ರ - ಬಿಡುಗಡೆಯಾದ ಮಾರನೆಯ ದಿವಸ) ಅವಕಾಶ ಮಾಡಿಕೊಟ್ಟ ರಾಜೂಗೆ ಕೃತಜ್ಞತೆ ಹೇಳದಿರುವುದು - ನಾನು ಮಾಡಬಹುದಾದ ದೊಡ್ಡ ತಪ್ಪು.

ಚಿತ್ರದ ನಾಯಕಿ ಜಯಪ್ರದ ನಿಜಕ್ಕೂ ಸುಂದರಿಯೆನ್ನುವುದರಲ್ಲಿ ಸಂಶಯವಿಲ್ಲ. (‘ಮೊನ್ನೆ ಮೊನ್ನೆ ನೋಡಿದ ಪಲ್ಲವಿ-ಅನುಪಲ್ಲವಿ ಚಿತ್ರದ ಕಿರಣ್ ಇದುವರೆಗೂ ನೆನಪಿನಲ್ಲಿ ಉಳಿದಿದ್ದು ಈಗ ಜಯಪ್ರದಾ ಆಕ್ರಮಿಸಿರಬಹುದೆ?)

ಮಯೂರಕ್ಕೆ ಕೆಲವು ಹನಿಗವನಗಳನ್ನು ಪ್ರಕಟನೆಗಾಗಿ ಕಳುಹಿಸಿದ್ದೇನೆ.

ಅಡಿ ಟಿಪ್ಪಣಿ: ಹೆಚ್. ಬಸವರಾಜು (ರಾಜು) ಜಯನಗರದಲ್ಲಿ ಸರ್ಕ್ಯುಲೇಟಿಂಗ್ ಲೈಬ್ರರಿ ನಡೆಸುವ ಸಮಾಜ ಸೇವಕರು. ರಾಜ್‍ಕುಮಾರ್ ಕಟ್ಟಾ ಅಭಿಮಾನಿಯಾಗಿದ್ದ ರಾಜು, ಅಭಿಮಾನಿಗಳ ಸಂಘವೊಂದನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಯೋಜನೆಯೊಂದನ್ನು ಹಮ್ಮಿಕೊಂಡಿದ್ದರು. ನನ್ನನ್ನು ಕಾರ್ಯದರ್ಶಿ ಮಾಡುವ ಇಚ್ಛೆ ಅವರದಾಗಿತ್ತು. ರಾಜ್ ಅಭಿಮಾನಿಗಳ ಸಂಘದ ಬಗ್ಗೆ ಭಿನ್ನಾಭಿಪ್ರಾಯವಿದ್ದ ನಾನು, ಈ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ. ಇಬ್ಬರಿಗೂ ವಾಗ್ವಾದವಾಗಿತ್ತು. ಕೊನೆಗೆ ‘ಆಶಯ’ ಎಂಬ ಹೆಸರಿನ ಸೇವಾ ಸಂಸ್ಥೆಯೊಂದನ್ನು ಕಟ್ಟಿ, ಐದು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದೆವು, ನಾನು ಖಜಾಂಚಿಯಾಗಿದ್ದೆ.

14-03-1983, ಸೋಮವಾರ

ಜರ್ಮನ್ ತತ್ತ್ವಜ್ಞಾನಿ, ರಾಜ್ಯಶಾಸ್ತ್ರ ನಿಪುಣ, ಅರ್ಥಶಾಸ್ತ್ರ ಪಾರಂಗತ ಕಾರ್ಲ್ ಮಾರ್ಕ್ಸ್ ನಿಧನರಾಗಿ ನೂರು ವರ್ಷಗಳಾಯಿತು.

15-03-1983, ಮಂಗಳವಾರ

ನೂರು ವರ್ಷಗಳ ಹಿಂದೆ ಫ್ರೆಡರಿಕ್ ಏಂಗಲ್ಸ್ - ಮಾರ್ಕ್ಸ್‌ನ ಒಡನಾಡಿ - "ಜಗತ್ತಿನ ಜನಸಂಖ್ಯೆಯಲ್ಲಿ ಒಂದು ತಲೆ ಕಡಿಮೆಯಾಯಿತು. ಆದರೆ ಆ ತಲೆ ಈ ತಲೆಮಾರಿನ ಶ್ರೇಷ್ಟ ತಲೆ" ಎಂದು ಶೋಕಿಸಿದ್ದ.

ಅಡಿ ಟಿಪ್ಪಣಿ: ಕಮ್ಯುನಿಸಂ ಪ್ರಭಾವ ಗಾಢವಾಗಿದ್ದ ಕಾಲವದು. ‘ರಂಗಸಂಪದ’ದ ನಾಟಕಗಳನ್ನು ತಪ್ಪದೇ ಒದುತ್ತಾ, ನವಕರ್ನಾಟಕ ಪಬ್ಲಿಕೇಶನ್ಸ್‍ನ ಕೆಲವೊಂದು ‘ಅಗ್ಗದ ಬೆಲೆಯ’ ಪುಸ್ತಕಗಳನ್ನು ಖರೀದಿಸಿ, ಅರ್ಧಬಂರ್ಧ ಓದಿ ಚರ್ಚಿಸುತ್ತಿದ್ದ ದಿನಗಳವು.


ನೆನಪು ಹಳೆಯದಾದರೇನು, ಮೆಲುಕು ನವನವೀನ -8

22-08-1983; ಸೋಮವಾರ

ಗೆಳೆಯ ಚಂದ್ರಶೇಖರ್‌ನಿಂದ ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ (ಲೇ: ತಾಪಿ ಧರ್ಮಾರಾವು) ಗ್ರಂಥವನ್ನು ಓದಲು ಪಡೆದೆ. ಪುಟ್ಟ ಗ್ರಂಥದ ಕರ್ತೃ ಆಂಧ್ರದ ಕ್ರಾಂತಿಕಾರಿ ಲೇಖಕರ ಗುಂಪಿನ ನೇತೃತ್ವ ವಹಿಸಿದ ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ. ಗುಪ್ತಾಂಗಗಳ ಪೂಜೆಯನ್ನು ಸಂಶೋಧನೆಯ ಒರೆಗಲ್ಲಿಗೆ ಹಚ್ಚಿ ಈ ಕ್ರಿಯೆಗಳ ಹಿಂದಿನ ಗೂಡಾರ್ಥಗಳನ್ನು ಅರಿಯಲು ಯತ್ನಿಸಿದ್ದಾರೆ. ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ದೇಶ - ದೇವಾಲಯಗಳಲ್ಲಿರುವ ಲೈಂಗಿಕ ಶಿಲ್ಪಗಳ ಅಸ್ಥಿತ್ವದ ಬಗ್ಗೆ ಸರಳವಾಗಿ ಅಷ್ತೇ ಗಟ್ಟಿಯಾಗಿ ಬರೆದಿದ್ದಾರೆ.

ಅಡಿ ಟಿಪ್ಪಣಿ: ‘ರಾಮುಡು’ ಎಂದು ನಾವು ರೇಗಿಸುತ್ತಿದ್ದ ತೆಲುಗು ಸಿನಿಮಾಪ್ರಿಯ ಜಿ.ಚಂದ್ರಶೇಖರ್ ಬಿ.ಇ. ಕಲಿಕೆಯ ಸಮಯದಲ್ಲಿ ಸಹಪಾಠಿ. ಅಪರೂಪದ ಪುಸ್ತಕಗಳನ್ನು ಎರವಲು ಕೊಡುತ್ತಿದ್ದ. ನನ್ನಂತೆಯೇ ಡಿ.ಆರ್.ಡಿ.ಓ. ಸೇರಿ ಇಪ್ಪತ್ತು ವರ್ಷಗಳ ಕಾಲ ಕೊಚ್ಚಿಯ ಪ್ರಯೋಗಶಾಲೆಯಲ್ಲಿ ಕೆಲಸ ಮಾಡಿದ. ನಾನು ಮದ್ರಾಸಿನ ಐ.ಐ.ಟಿ.ಯಲ್ಲಿ ಎಂ.ಟೆಕ್. ಮಾಡುವ ಸಮಯದಲ್ಲಿಯೂ ಜತೆಗಿದ್ದ. ಪ್ರಸ್ತುತ ಬೆಂಗಳೂರಿನ ಡಿ.ಆರ್.ಡಿ.ಓ. ಪ್ರಯೋಗಶಾಲೆಯಲ್ಲಿ ಹಿರಿಯ ವಿಜ್ಞಾನಿ.

27-05-1983; ಶುಕ್ರವಾರ

ರಾಜ್‍ಕುಮಾರ್ ಮತ್ತು ಸನ್ಮಾನ ಸಮಾರಂಭಗಳು:

ರಾಜ್‍ಕುಮಾರ್ ಸ್ವಭಾವತಃ ಒಬ್ಬ ಒಳ್ಲೆಯ ನಟ, ನಿಜ. ಈ ಒಳ್ಳೆಯತನದಿಂದಲೇ ಆತ ಇಷ್ಟು ಜನಪ್ರಿಯ ನಟನಾಗಲು ಸಾಧ್ಯವಾದದ್ದು. ಆದರೆ ಇತ್ತೀಚೆಗೆ ರಾಜ್‍ಕುಮಾರ್ ಗುಂಡೂರಾಯರನ್ನೂ ಮೀರಿಸುವಷ್ಟು ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸುವುದು; ರಾಜ್‍ಕುಮಾರ್ ಹತ್ತಿರದ ಬಳಗದವರ ಗೂಂಡಾಗಿರಿ; ಕಟ್‍ಔಟ್‍ಗಳ ನಿರ್ಮಾಣದಲ್ಲಿ ಪೈಪೋಟಿ ನಡೆಸಿ ದಾಖಲೆ ನಿರ್ಮಿಸುತ್ತಿರುವ ಹುಚ್ಚು ಅಭಿಮಾನಿಗಳು; ರಾಜ್‍ಕುಮಾರನನ್ನು ಅಭಿನವ ಋಷ್ಯಶೃಂಗ ಎಂದು ಭಾವಿಸಿ ಪೂಜಿಸುವ ಭಕ್ತರು; ವಿಷ್ಣುವರ್ಧನನ ಮೇಲೆ ಕಲ್ಲು - ಚಪ್ಪಲಿ ತೂರುವುದು; ಅವನ ಕಟ್‍ಔಟ್‍ಗಳನ್ನು, ವಾಲ್‍ಪೋಸ್ಟ್‍ಗಳನ್ನು ಧ್ವಂಸ ಮಾಡುವುದು .... ಇತ್ಯಾದಿಗಳು ನಮ್ಮ ಸಾರ್ವಜನಿಕ ಜೀವನ ದುರಂತಕ್ಕೀಡಾಗುತ್ತಿರುವ ಸ್ಪಷ್ತ ಲಕ್ಷಣಗಳು.

ಈ ಸಿನಿಮಾ ಜನರ ಬಗ್ಗೆ ಈ ಬಗೆಯ ಅಭಿಮಾನ ‘ಹುಚ್ಚಿನ’ ಲಕ್ಷಣವಲ್ಲದೆ ಬೇರೇನೂ ಅಲ್ಲ. ಆದರೆ ಈ ಹುಚ್ಚಿಗೆ ಬಲಿಯಾದವರು ಹೆಚ್ಚಾದಾಗ ಅಪಾಯವಿದೆ. ರಾಜ್‍ಕುಮಾರನ ಲಕ್ಷಾಂತರ ಅಭಿಮಾನಿಗಳಲ್ಲಿ ದಿನಕ್ಕೆ ಹಲವಾರು ರೂಪಾಯಿಗಳನ್ನು ಸಂಪಾದಿಸುವ ಬಡಜನರೇ ಹೆಚ್ಚಿದ್ದಾರೆ - ಅದರಲ್ಲೂ ಅನಕ್ಷರಸ್ತರ ಹೆಚ್ಚು ಮಂದಿ. ಈ ಜನಗಳನ್ನು ಒಳ್ಲೆಯ ದಾರಿಗೆ ತರುವ ಶಕ್ತಿ ರಾಜ್‍ಕುಮಾರ್‌ಗೆ ಇದೆ. ಅಪಾರ ಹಣ ಮತ್ತು ಮಾನವ ಶಕ್ತಿಯನ್ನು ಹೂಮಳೆ ಸುರಿಸಿಕೊಳ್ಳುವುದಕ್ಕಾಗಿ, ಮೆರವಣಿಗೆ ಮಾಡಿಸಿಕೊಳ್ಳುವುದಕ್ಕೆ, cutoutಗಳನ್ನು ಮತ್ತು satarಗಳನ್ನು ಮಾಡುವುದಕ್ಕೆ, ಅವಕ್ಕೆ ಹಾಲು ಅಭಿಷೇಕ ಮಾಡುವುದಕ್ಕಾಗಿ ವ್ಯರ್ಥ ಮಾಡಬಾರದು. ಇದು "ತಾನೇ ದೇವರು" ಎಂದು ಭಾವಿಸುವ ಜನರೆಲ್ಲರೂ ತಮ್ಮ ಅನುಯಾಯಿಗಳನ್ನು ಕೂಪಕ್ಕೆ ತಳ್ಲುವ ದುರಂತ ರೀತಿ. ಇದರ ಬದಲು ತನ್ನ ಅಭಿಮಾನಿಗಳಿಗೆ ತಿಳಿವಳಿಕೆ ನೀಡಿ ಇದೇ ಅಪಾರ ಹಣ ಮತ್ತು ಮಾನವ ಶಕ್ತಿಯನ್ನು ಸಮಾಜ ಸೇವಾಕಾರ್ಯಗಳಿಗೆ (ಅಂಗವಿಕಲರ ಕಲ್ಯಾಣ ಕಾರ್ಯಗಳು, ಆಸ್ಪತ್ರೆ - ಶಾಲೆ ಮುಂತಾದವುಗಳಿಗೆ ಅನುದಾನ; ವಯಸ್ಕರ ಶಿಕ್ಷಣ) ವಿನಿಯೋಗಿಸಿದರೆ ಆ ದೈವತ್ವದ (ದೇವರು ಎಂಬುದೇನಾದರೂ ಇದ್ದರೆ) ಮಟ್ಟಕ್ಕೆ ರಾಜ್‍ಕುಮಾರ್ ಏರುತ್ತಾರೆ. ಇಲ್ಲದಿದ್ದರೆ ಅವರೂ ಕೂಡ ಒಬ್ಬ ಕ್ಷುಲ್ಲಕ ರಾಜಕಾರಣಿಯಂತೆ ತಾವೇ ನಾಶಗೊಂಡು ದೇಶ ಕೂಡ ಹಾಳುಗೆಡವುತ್ತಾರೆ.

ಅಡಿ ಟಿಪ್ಪಣಿ: ದಿನಚರಿಯಲ್ಲಿ ಸ್ವಾರಸ್ಯಕರ ಅಂಶಗಳೇನೂ ಇರದಿದ್ದ ಸಮಯ, ಇಂಥ ಟಿಪ್ಪಣಿಗಳನ್ನು ದಾಖಲೆ ಮಾಡುವ ಹವ್ಯಾಸ ಇತ್ತು. ಟಿಪ್ಪಣಿಯ ಶೈಲಿ ಇಂದು ನೋಡಿದರೆ, ಬಹುಶಃ ಲಂಕೇಶ್ ಪತ್ರಿಕೆಯ ಗಾಢ ಪ್ರಭಾವ ನನ್ನ ಮೇಲಾಗಿತ್ತು ಎಂದು ತೋರುತ್ತದೆ. ಲಂಕೇಶ್ ಪತ್ರಿಕೆಗಾಗಿ ಕಾದು, ಮೊದಲ ಅಕ್ಷರದಿಂದ ಕೊನೆಯ ಅಕ್ಷರದವರೆಗೆ ಓದುತ್ತಿದ್ದ ದಿನಗಳವು.

Wednesday, August 18, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 7

24 ಮಾರ್ಚ್ 1983, ಮಂಗಳವಾರ

Blind Schoolನಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿರುವುದು ಒಂದು ಹೊಸ ಬಗೆಯ ಅನುಭವ. ಕಣ್ಣಿರದ ಜನರ ಭಾವನೆಗಳನ್ನು ಕಣ್ಣಿದ್ದೂ ಕುರುಡರಾಗಿರುವ ನಮ್ಮ ಭಾವನೆಗಳಿಗೆ ಹೋಲಿಸಿದಾಗ ದೊರಕುವ ಅನುಭವದ ಪಾಠ ನೆನಪಿನಲ್ಲಿ ಉಳಿಯುವಂತಹುದು. ರಾಜೇಂದ್ರ Secretary, Sri Ramana Maharshi Academy for the Blind - ಬದಲಾದ ಮನುಷ್ಯನೊಬ್ಬನ ಕಥೆ. ಹೇಗಿದ್ದವ ಹೇಗಾದ? Sinner to a Saint?

ಮಲ್ಲಿಕಾರ್ಜುನ್ ಮಾದುತ್ತಿರುವ ಸೇವೆ ಕೂಡ ಮರೆಯಲಾಗದಂಥಹುದು.

ಇಂದು ಬರೆಯಲು ರಾಘವನ್ ಕಸಿನ್ ಡಾ||ರಾಣಿ ಬಂದಿದ್ದರು. (‘ವಿಜಿ’ ಅವರ ಅಕ್ಕ). ಅವರ ತಾಯಿ ಕೂಡಾ ಅಲ್ಲಿಗೆ ಬಂದಿದ್ದರು. ಅವರಿಬ್ಬರದೂ ಅದೆಷ್ಟು ಸ್ನೇಹಾ ಮನೋಭಾವ. ವಿಶಾಲ ಹೃದಯಿಗಳೂ ಕೂಡ.

ಆನಂದ್ ಕೂಡಾ ಬಂದಿದ್ದ. ನಿನ್ನೆ ರಾಘವನ್ ಮತ್ತು ಆನಂದ್. ಮೊನ್ನೆ ಮೋಹನ್ ಮತ್ತು ಆನಂದ್. ಮೊದಲ ದಿನ ನಾನು ಮತ್ತು ಮೋಹನ್.

ಸಂಸಾರದಲ್ಲಿ ಸ-ರಿ-ಗ-ಮ ನಾಟಕಕ್ಕೆ ಹೋಗಿದ್ದೆ.
ನೋಡಬಹುದಾದ ನಾಟಕ.

ನಿನ್ನೆ ರಾತ್ರಿಯ ಅಸಾಧ್ಯ ತಲೆ ಸಿಡಿತ - ನಿದ್ರೆಗಳನ್ನು ತಿಂದುಬಿಡುವಷ್ಟು ಕ್ರೂರವಾಗಿತ್ತು.

ನರ್ಸಿಂಗ್ ಹೋಂಗೆ (‘ಭಾವ’ ಅವರನ್ನು ನೋಡುವ ಸಲುವಾಗಿ) ಹೋಗಿದ್ದೆನೆಂದು ಸುಳ್ಳು ಹೇಳಬಾರದಿತ್ತು.

ಅಡಿ ಟಿಪ್ಪಣಿ: ರಮಣ ಮಹರ್ಷಿ ಅಂಧರ ಶಾಲೆಯ ಮಕ್ಕಳಿಗೆ scribe ಆಗಿ ಬಿ.ಎ. ಡಿಗ್ರಿ ಪರೀಕ್ಷೆಗೆ ಬರೆಯಲು ಹೋಗುತ್ತಿದ್ದೆವು. ನಾವಿನ್ನೂ ಪದವೀಧರರಾಗಿರದಿರುವುದು ಹಾಗೂ ಆರ್ಟ್ಸ್ ವಿಷಯಗಳನ್ನು ಕಲಿತಿರದಿರುವುದು ನಮಗೆ ಬರೆಯುವ ಅರ್ಹತೆಗಳನ್ನು ಕೊಟ್ಟಿತ್ತು.

ಮೋಹನ್ ಮರೆತು ಹೋಗಿದ್ದಾನೆ. ಆನಂದ್ ನಾನು ಈಗ ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿಯೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್.ಓ.ಡಿ. ಮಲ್ಲಿಕಾರ್ಜುನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಎಲ್ಲಿದ್ದಾರೋ ಗೊತ್ತಿಲ್ಲ.

ನನ್ನ ತಂದೆಯ ಭಾವ ಮೂತ್ರಕೋಶದ ತೊಂದರೆಗೆ ಜಯನಗರದ ದೀಪಕ್ ನರ್ಸಿಂಗ್ ಹೋಂ ಸೇರಿದ್ದರು. ನಿತ್ಯ ಸಂಜೆ ನೋಡಿಕೊಂಡು ಬರುವ ಜವಾಬ್ದಾರಿಯಿಂದ ಒಂದು ದಿನ ನುಣುಚಿಕೊಂಡಿದ್ದೆ. ಬಹುಶಃ ನಾಟಕ ನೋಡುವ ನೆಪವಿರಬೇಕು.

Sunday, August 15, 2010

ಶ್ರಮಯೇವ ಜಯತೆ!

ಒಂದೇ ಉಸಿರಿನಲ್ಲಿ 1978ರ ಡೈರಿ ನಮೂದುಗಳನ್ನು ಓದುವುದು ಒಂದು ರೀತಿಯ ಏಕತಾನ ಎನಿಸಬಹುದೇನೊ? ಅದಕ್ಕೆಂದೇ ಇನ್ನು ಮುಂದೆ ಸಾರಸ್ವತ ಲೋಕಕ್ಕೆ ಸಂಬಂಧಿಸಿದ ಇಲ್ಲವೆ ನನ್ನ ದೃಷ್ಟಿಯಲ್ಲಿ ಆಸಕ್ತಿಯುತ ಎನಿಸಬಹುದಾದ ದಾಖಲೆಗಳನ್ನು ಪ್ರಕಟಿಸಲಿದ್ದೇನೆ.

1983ರ ಏಪ್ರಿಲ್ 7ರಂದು ದಾಖಲಿಸಿದ ಮಾಹಿತಿ ಹೀಗಿದೆ:

ಇದು ರಾಯಚೂರಿನ ಕವಿ - ವಿಚಾರವಾದಿ ಶಾಂತರಸರು ಬರೆದಿರುವ ಕವನ.
ಕಲಬುರ್ಗಿ ಆಕಾಶವಾಣಿ ಏರ್ಪಡಿಸಿದ್ದ `ಶ್ರಮಯೇವ ಜಯತೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕವನವನ್ನು ಅವರು ಓದಿದ್ದರು. ಈಗ ರಾಯಚೂರಿನ `ಗೀತೆ'ಯ ವಾರಸುದಾರರು
ಅನಗತ್ಯ ಗೊಂದಲವೆಬ್ಬಿಸುತ್ತಿದ್ದಾರೆ. ಗೀತೆಯನ್ನು ನಿಂದಿಸಲೆಂದೇ ಈ ಕವಿತೆ ಬರೆದಿದ್ದಾರೆ ಎಂಬ ಮಾತು ಸುಳ್ಳು. ದುಡಿಮೆಯ ಮಹತ್ವವನ್ನು - ತತ್ವವನ್ನು ಕವಿ ಇಲ್ಲಿ ಕಾರ್ಲ್ ಮಾರ್ಕ್ಸ್ ನ ಹಿ
ನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. "ಸಲಿಕೆ ಗುದ್ದಲಿ ಕಂಟೆ ರಂಟೆಗಳು" ಎಲ್ಲರ ಕೈಗಳಿಗೆ ಬರಬೇಕು ಎಂದು ಹೇಳಿರುವ ಮಾತು ಮಾರ್ಕ್ಸ್ ನಿಧನದ ಶತಮಾನೋತ್ಸವದ ಸಂದರ್ಭದಲ್ಲಿ ಮಹತ್ವದ್ದಾಗುತ್ತದೆ.

"ಫಲಾಫಲಗಳನ್ನು ನನಗೆ ಬಿಡು, ನಾನು ಕೊಟ್ಟರೆ ಕೊಟ್ಟೆ, ಇಲ್ಲದಿದ್ದರೆ ಇಲ್ಲ. ಅದು ನಿನ್ನ ಕರ್ಮ" ಎಂಬ ಶೋಷಕ ತತ್ವಗಳಿಂದಾಗಿಯೇ ನಮ್ಮ ಅವಸ್ಥೆ ದಿನದಿಂದ ದಿನಕ್ಕೆ ದಟ್ಟ ದಾರಿದ್ರ್ಯದತ್ತ ಸಾಗುತ್ತಿದೆಯಲ್ಲವೆ?

ಅಡಿ ಟಿಪ್ಪಣಿ: ಎಷ್ಟೋ ವರ್ಷಗಳ ನಂತರ ಇಂದಿನ ಮರು ಓದಿಗೆ ಸಿಕ್ಕ ಡೈರಿಯ ಪುಟಗಳು ನನಗೇ ಅಚ್ಚರಿ ಹುಟ್ಟಿಸುವಷ್ಟು ಸ್ವಾರಸ್ಯಕರವಾಗಿವೆ. ಜತೆಗೆ ನಾನು ಅಂದು ಕಮ್ಯುನಿಸ್ಟ್ ಪ್ರಭಾವಕ್ಕೆ ಒಳಗಾಗಿದ್ದು ನೆನಪಿಗೆ ಬರುತ್ತದೆ. ಕಾಲೇಜು ಕಲಿಕೆಯ ನಂತರ ಮಿತ್ರ ರಾಘವನ್ ಅಮೆರಿಕೆಗೆ ಉನ್ನತ ಶಿಕ್ಷಣಕ್ಕೆಂದು ತೆರಳಿದ. ಆತ ಮೊದಲ ಬಾರಿ ಇಂಡಿಯಾಕ್ಕೆ ಬಂದಾಗ ನನಗೆ ತಂದ ಉಡುಗೊರೆ - ಕೆಂಪು ಟೀಶರ್ಟ್. ನನ್ನ ಕಮ್ಯುನಿಸ್ಟ್ ಮಿತ್ರನಿಗೆ ಎಂಬ ಒಕ್ಕಣೆಯೊಂದಿಗೆ. ಹಳೆಯ ಬಟ್ಟೆಯ ಗಂಟಿನಲ್ಲಿ ಆ ಶರ್ಟ್ ಇನ್ನೂ ಮನೆಯಲ್ಲಿಯೇ ಇರಬಹುದು!)

Friday, August 13, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 6

14-10-1978; ಶನಿವಾರ

ನಮ್ಮನೆ ಗೃಹಪ್ರವೇಶ ಆಗಿ ಇಂದಿಗೆ 6 ತಿಂಗಳು

06:00 ಎದ್ದದ್ದು
08:00 - 10:30 Calculus
11:00 - 11:30 Zoology
11:30 - 12:30 ವಿಶ್ವನ ಜೊತೆ
01:00 - 02:30 Zoology
03:30 - 05:00 Magnetism
06:00 - 08:00 IV Block - ಖರ್ಚು ರು. 0.10 + ರು. 0.25 = ರು. 0.35
08:30 - 09:00 Calculus
10:00 - 10:30 Calculus
10:35 ನಿದ್ದೆ

ಒಟ್ಟು ಓದು = 7 ಗಂ.

15-10-1978; ಭಾನುವಾರ

06:45 ಎದ್ದದ್ದು
08:00 - 08:30 Algebra
08:45 - 11:00 C.C.L. (ರು. 0.10, fine)
10:00 - 11:00 Calculus at CCL
11:05 - 11:30 ಶ್ರೀಧರ್ (ವಿಶ್ವನ ಫ್ರೆಂಡ್) ಹರಟೆ
12:30 - 02:00 P.Chemistry
02:45 - 04:15 Magnetism
05:00 - 05:15 Mill (ಹಿಟ್ಟು ಬೀಸಿಸುವ ಕೆಲಸ)
05:30 - 08:15 ಸತ್ಯನಾರಾಯಣ್ ಜೊತೆ (ಖರ್ಚು ರು. 0.10)
08:30 - 09:15 ವಿಶ್ವನ ಜೊತೆ ಹರಟೆ
10:00 - 10:15 ‘ಸುಧಾ’ ಓದು
10:30 ನಿದ್ದೆ

ಒಟ್ಟು ಓದು = 4 ಗಂ. 30 ನಿ.

16-10-1978; ಸೋಮವಾರ

06:30 ಎದ್ದದ್ದು
08:00 - 09:30 Trigonometry
10:15 - 01:30 Trigonometry
`ಹಳ್ಳಿಯ ಹತ್ತು ಸಮಸ್ತರು’
02:00 - 03:15 Current Electricity
03:30 - 05:30 ನಿದ್ದೆ
06:00 - 07:15 IV Block
07:30 - 08:45 Current Electricity
09:15 - 11:00 Current Electricity
11:05 ನಿದ್ದೆ

ಒಟ್ಟು ಓದು = 8 ಗಂ. 45 ನಿ.

17-10-1978; ಮಂಗಳವಾರ

05:45 ಎದ್ದದ್ದು
06:00 - 07:30 Analytical Geometry
08:00 - 09:00 "
11:15 - 12:00 "
12:30 - 02:15 "
02:45 - 04:15 Electrostatics
05:30 - 07:00 "
07: 00 - 08:00 Organic Chemistry


Thursday, August 12, 2010

ನೆನಪು ಹಳೆಯದಾದರೇನು, ಮೆಲುಕು ನವನವೀನ - 5

12-10-1978; ಗುರುವಾರ

06:00 ಎದ್ದದ್ದು
08::00 - 09:30 Light
10:00 - 11:00 CCL (ಸಿಟಿ ಸೆಂಟ್ರಲ್ ಲೈಬ್ರರಿ)

ಕಾರಂತರ `ಹಳ್ಳಿಯ ಹತ್ತು ಸಮಸ್ತರು', `ಕನ್ನಡಿಯಲ್ಲಿ ಕಂಡಾತ' &
Agatha Christie's Mystery 'A body in the library' ತಂದೆ.

11:30 - 12:00
`ಹಳ್ಳಿಯ ಹತ್ತು ಸಮಸ್ತರು'
12:30 - 01:00 Calculus
03:15 - 04:30 Calculus
04:30 - 05:00 '
A body in the library'
06:00 - 07:15 CCL
07:45 - 09:00 Inorganic Chemistry
10:30 ನಿದ್ದೆ

ಒಟ್ಟು ಓದು : 4 ಗಂ. 30 ನಿ.

ಅಡಿ ಟಿಪ್ಪಣಿ: (CCLಗೆ ನಿಯಮಿತವಾಗಿ ಹೋಗುತ್ತಿದ್ದದ್ದು ಮನೆಗೆ ಬರದ/ತರಿಸದ ಪತ್ರಿಕೆ ಹಾಗೂ ಮ್ಯಾಗಝಿನ್‍ಗಳತ್ತ ಕಣ್ಣು ಹಾಯಿಸಲು/ಓದಲು.
‘ಪ್ರಜಾಮತ’, ‘ಪ್ರಪಂಚ’, ‘ಸುಧಾ’ ಹಾಗೂ ‘ಮಯೂರ’ ಒಮ್ಮೊಮ್ಮೆ ಇಡಿ-ಇಡಿಯಾಗಿ ಲೈಬ್ರರಿಯಲ್ಲಿ ಕುಳಿತು ಓದುತ್ತಿದ್ದೆ. ಹಾಗೆಯೇ ಸಿನಿಮಾ ಪತ್ರಿಕೆಗಳಾದ
‘ಸ್ಕ್ರೀನ್’, ‘ಫಿಲಮ್‍ಫೇರ್’ ಒಬ್ಬರಿಂದ ಮತ್ತೊಬ್ಬರ ಕೈಗೆ ಶೀಘ್ರವೇ ದಾಟಿಹೋಗುತ್ತಿದ್ದವು.)

13-10-1978;
ಶುಕ್ರವಾರ

06:00 ಎದ್ದದ್ದು
09:00 - 11:30 ಸುಧೀರ್ ಮನೆ + CCL ರು. 0.10 ಫೈನ್ (ಸಿಟಿ ಸೆಂಟ್ರಲ್ ಲೈಬ್ರರಿ)
01:00 - 03:30
Botany
03:45 - 04:50 Zoology
06:15 - 07:00 Walking, ಭಾಸ್ಕರ್ ಜೊತೆ (ಟೈಪ್‍ರೈಟಿಂಗ್ ಇನ್‍ಸ್ಟಿಟ್ಯೂಟ್ ಮಾಲಿಕರ ಮಗ, ಪ್ರಸ್ತುತ ಅವೈವ ಇನ್ಶ್ಯುರೆನ್ಸ್ ಉದ್ಯೋಗಿ)

ವಿಶ್ವನ ಅಣ್ಣ ಚಂದ್ರನ ಹಿಂದೇನೇ ನಾನೂ ಭಾಸ್ಕರ್ ಹೋಗ್ತಿದ್ವು. ಅವನು ಧಾಪುಗಾಲು. ನಾವು ಹಿಂದುಳಿಯುವಂತೆ ಮಾಡಿತು. ಹಿಮಾಲಯ ಸ್ಟೋರ್ಸ್ ಬಳಿ
ಬರುವಷ್ಟರಲ್ಲಿ ಅವನ ಬಾಯಲ್ಲಿ ಸಿಗರೇಟ್ ನಲಿದಾಡುತ್ತಿತ್ತು. ನಾನು, ಅವನು ಹೀಗೆಂದು ಖಂಡಿತಾ ತಿಳಿದಿರಲಿಲ್ಲ. ಅವನಿಗೆ ಕಸಿವಿಸಿಯಾಗಿರಬಹುದು; ನನ್ನತ್ತಲೇ
ದುರುಗುಟ್ಟಿಕೊಂಡು ನೋಡ್ತಿದ್ದ. ನಾನು ನೋಡಿಯೂ ನೋಡದವನಂತೆ ಮುಂದೆ ಸಾಗಿದೆ.

07:00 - 08:30 ಸತ್ಯನಾರಾಯಣ್ ಜೊತೆ ಹರಟೆ (ಪಿ.ಯು.ಸಿ. ಸಹಪಾಠಿ, ಪ್ರಸ್ತುತ ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿ)
Puff + Toast
08:30 - 10:00 ಜಯಮ್ಮನ ಮನೇವ್ರು (ಮಲ್ಲೇಶ್ವರದಲ್ಲಿರುವ ಹತ್ತಿರದ ನೆಂಟರು) ಬಂದಿದ್ರು
10:00 - 10:50 Quiz
11:00 ನಿದ್ದೆ

ಒಟ್ಟು ಓದು : 3 ಗಂ. 30 ನಿ.

ಅಡಿ ಟಿಪ್ಪಣಿ: (ಆಗೆಲ್ಲಾ ನಮ್ಮ ಕಲ್ಪನೆಯಲ್ಲಿ ಸಿಗರೇಟ್ ಸೇದುವವರು, ಮದ್ಯ ಸೇವಿಸುವವರು ಕೆಡುಕರು ಎಂಬ ಭಾವನೆ . ಸ್ವಾರಸ್ಯಕರ ಸಂಗತಿಯೆಂದರೆ ನಮ್ಮ ನೆರೆಯ ಮನೆಯಲ್ಲಿದ್ದ ನಾಲ್ವರು
ಅಣ್ಣ-ತಮ್ಮಂದಿರಲ್ಲಿ
ಚಂದ್ರ ಎರಡನೆಯವನು. ರಕ್ಷಣಾಪಡೆಯಲ್ಲಿ ಎಂಜಿನಿಯರ್ ಆಗಿದ್ದ ಮೊದಲನೆಯವನು ಸೂರಿ, ಮನೆಯ ಮುಂದಿನ ಸಾಲಿನ ಅಂಗಡಿಯಲ್ಲಿ ಸಿಗರೇಟ್ ಹಚ್ಚುತ್ತಿದ್ದ.
ಚಂದ್ರ ಒಂದೂವರೆ
ಕಿಲೋಮೀಟರ್ ದಾಟಿದ ನಂತರವಷ್ಟೇ ಸಿಗರೇಟ್ ಹಚ್ಚಲು ಧೈರ್ಯ ಮಾಡುತ್ತಿದ್ದದ್ದು. ಮೂರನೆಯ ಸಹೋದರ ವಿಶ್ವನಿಗೆ ನಾಲ್ಕು ಕಿಲೋಮೀಟರ್ ದೂರದ ಸೌತ್‍ಎಂಡ್
ಸರ್ಕಲ್ ಫಾಸಲೆ ದಾಟಿದ ನಂತರವೇ ಸಿಗರೇಟ್ ಝೋನ್ ಆರಂಭವಾಗುತ್ತಿತ್ತು. ವಿಜಯ ಕಾಲೇಜಿನಲ್ಲಿ ನನಗೆ ನಾಲ್ಕು ವರ್ಷದ ಸೀನಿಯರ್ ಅವನು. ಕೊನೆಯ ಸಹೋದರ ಸೀನ, ನನ್ನ
ಬ್ಯಾಚ್‍ನಲ್ಲಿಯೇ ಎಂಜಿನಿಯರಿಂಗ್ ಕಲಿತವನು. ಅವನು ಸಿಗರೇಟ್ ಹಿಡಿಯಲು ಧೈರ್ಯ ಮಾಡುತ್ತಿದ್ದದ್ದು ಎಂ.ಜಿ.ರಸ್ತೆಯ ಮಿತಿ ಮುಟ್ಟಿದ ನಂತರ. ಒಟ್ಟಿಗೆ ಇಂಗ್ಲಿಷ್ ಸಿನಿಮಾಕ್ಕೆಂದು
ಅವನೊಡನೆ ಹೋದಾಗ ಮಧ್ಯಂತರದಲ್ಲಿ ಬುಸು, ಬುಸು ಸಿಗರೇಟ್ ಪರೋಕ್ಷ ಸೇವನೆಯ ಭಾಗ್ಯ ನನ್ನದಾಗುತ್ತಿತ್ತು.)